Advertisement

ಜಿಟಿಜಿಟಿ ಮಳೆ, ಬೆಳೆಗಳಿಗೆ ರೋಗದ ಭೀತಿ!

03:58 PM Jul 15, 2022 | Team Udayavani |

ಅಮೀನಗಡ: ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ರೈತರು ಬೆಳೆದ ಬೆಳೆಗಳಿಗೆ ರೋಗದ ಭೀತಿ ಎದುರಾಗಿದೆ.

Advertisement

ಹೌದು, ಹುನಗುಂದ ತಾಲೂಕಿನಲ್ಲಿ ಅಂದಾಜು 7836 ಹೆಕ್ಟೇರ್‌ ಭೂಮಿಯಲ್ಲಿ ಸೂರ್ಯಕಾಂತಿ, 25471 ಹೆಕ್ಟೇರ್‌ ಭೂಮಿಯಲ್ಲಿ ತೊಗರಿ, 1621 ಹೆಕ್ಟೇರ್‌ ಭೂಮಿಯಲ್ಲಿ ಸಜ್ಜೆ, 1356 ಹೆಕ್ಟೇರ್‌ ಭೂಮಿಯಲ್ಲಿ ಹೆಸರು ಬೆಳೆ ಬಿತ್ತನೆ ಮಾಡ ಲಾಗಿದೆ. ಆದರೆ, ಕಳೆದ ಎರಡು ವಾರದಿಂದ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಸುರಿ ಯುತ್ತಿರುವ ಜಿಟಿಜಿಟಿ ಮಳೆ ಮತ್ತು ಮೋಡಕವಿದ ತಂಪು ವಾತಾವರಣದಿಂದ ಬೆಳೆದ ಬೆಳೆಗಳಿಗೆ ರೋಗ ಭಾದೆ ಕಂಡು ಬಂದಿದೆ. ಇದರಿಂದ ರೈತರಿಗೆ ಆತಂಕ ಎದುರಾಗಿದೆ.

ಬೆಳೆಗಳ ಪರಿಸ್ಥಿತಿ: ತಾಲೂಕಿನ ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಮುಸುಕಿನ ಜೋಳ, ಸಜ್ಜೆ, ನವಣಿ, ಸೂರ್ಯಕಾಂತಿ ಬೆಳೆಗಳು ಬಿತ್ತನೆಯಾಗಿದ್ದು, ತೊಗರಿ ಬೆಳೆ ಇನ್ನೂ ಬಿತ್ತನೆ ಹಂತದಲ್ಲಿದೆ. ಆದರೆ, ಬಿತ್ತನೆ ಮಾಡಿದ ಮುಸುಕಿನ ಜೋಳ ಬೆಳೆಯಲ್ಲಿ ಶೇ 15 ರಷ್ಟು ಫಾಲ್‌ ಸೈನಿಕ್‌ ಹುಳುವಿನ ಬಾಧೆ ಕಂಡು ಬಂದಿದೆ. ಹೆಸರು ಬೆಳೆಯಲ್ಲಿ ಶೇ 25 ರಷ್ಟು ಹಳದಿ ನಂಜಾಣು ರೋಗ ಬಾಧೆ ಕಂಡು ಬಂದಿದೆ, ಸೂರ್ಯಕಾಂತಿ ಬೆಳೆಯಲ್ಲಿ ಶೇ. 5ರಷ್ಟು ನೆಕ್ರೋಸಿಸ್‌ ನಂಜಾಣು ರೋಗ ಬಾಧೆ ಕಂಡು ಬಂದಿದೆ.

ಶೇ.25 ರಷ್ಟು ಹಳದಿ ರೋಗ: ತಾಲೂಕಿನಲ್ಲಿ ಶೇ. 25ರಷ್ಟು ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಬಾಧೆ ಕಂಡು ಬಂದಿದೆ. ಈ ರೋಗವು ಆರಂಭದಲ್ಲಿ ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ ನಂತರ ಎಲೆಗಳು ಕಪ್‌ ರೀತಿಯಲ್ಲಿ ಮುದುಡಿಕೊಳ್ಳುತ್ತವೆ.ರೋಗದ ತೀವ್ರತೆ ಹೆಚ್ಚಾದಾಗ ಸಸಿಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳು ಸುಕ್ಕುಗಟ್ಟುತ್ತವೆ ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.

ಹಳದಿ ರೋಗ ತಡೆಯುವುದೇ ಹೇಗೆ?: ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಕಂಡು ಬಂದಲ್ಲಿ ರೈತರು ರೋಗಪೀಡಿತ ಸಸಿಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಆ ಸಸಿಗಳನ್ನು ಕಿತ್ತಿ ಮಣ್ಣಿನಲ್ಲಿ ಹೂಳಬೇಕು ಮತ್ತು ರೋಗ ಹರಡುವುದನ್ನು ತಡೆಯಲು ಪ್ರತಿ ಲೀಟರ್‌ ನೀರಿಗೆ 0.3ಮಿ.ಲಿ ಇಮಿಡಾಕ್ಲೋಪ್ರೀಡ್‌ 7.8 ಎಸ್‌.ಎಲ್‌ ಅಥವಾ 0.2 ಗ್ರಾಂ ಥೈಯಾಮಿಥಾಕ್ಸಾಮ್‌ 25 ಡಬ್ಲೂ.ಜಿ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಬೆಳೆಸಿ ಸಿಂಪಡಣೆ ಮಾಡಬೇಕು ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

Advertisement

ರೈತರ ಆಗ್ರಹ: ಅನ್ನದಾತ ಸಾಲ ಮಾಡಿ ಬೆಳೆ ಬೆಳೆದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಇದ್ದಾಗ ಬೆಳವಣಿಗೆ ಹಂತದಲ್ಲಿಯೇ ನಿರಂತರ ಜಿಟಿಜಿಟಿ ಮಳೆಯಿಂದ ಬೆಳೆದ ಬೆಳೆಗಳಿಗೆ ರೋಗಗಳ ಬಾಧೆ ಕಂಡು ಬಂದಿದೆ. ಬೆಳೆಗಳು ಹಾನಿಯಾಗುವ ಭೀತಿ ಕಾಡುತ್ತಿದೆ. ಮಳೆ ಬೇಕು ಎಂದು ಪ್ರಾರ್ಥಿಸಿದ್ದ ರೈತರು ಇದೀಗ ಮಳೆ ನಿಲ್ಲಿಸು ಎಂದು ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.ಬೆಳೆಗಳನ್ನು ಕಾಪಾಡಲು ರೈತರು ಹರಸಾಹಸಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಸಹಾಯಕ್ಕೆ ಸರ್ಕಾರ ಮುಂದಾಗಬೇಕು ಎಂಬುದು ರೈತರ ಆಗ್ರಹ.

ಕಳೆದ ಎರಡು ವಾರದಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದ ಮಳೆಯ ವಾತಾವರಣದಿಂದ ನಾವು ಬೆಳೆದ ಬೆಳೆಗಳಿಗೆ ರೋಗಗಳು ಬಂದಿವೆ. ಇದರಿಂದ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಬೆಳೆಗಳು ನಾಶವಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಇಲಾಖೆ ರೈತರ ಸಹಾಯಕ್ಕೆ ಮುಂದಾಗಿ ರೋಗ ತಡೆಗಟ್ಟಲು ಶ್ರಮಿಸಬೇಕಿದೆ. –ಪ್ರಶಾಂತ ಮನ್ನೆರಾಳ, ಯುವರೈತ

ನಿರಂತರ ಜಿಟಿಜಿಟಿ ಮಳೆಯಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಕಳೆದ ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಬೆಳೆಗಳಿಗೆ ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ರೈತರು ಮುಂಜಾಗ್ರತವಾಗಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ರೈತರಿಗೆ ತಿಳಿಸಲಾಗಿದೆ. -ಸಿದ್ದಪ್ಪ ಪಟ್ಟಿಹಾಳ, ಸಹಾಯಕ ಕೃಷಿ ನಿರ್ದೇಶಕರು, ಹುನಗುಂದ

-ಎಚ್‌.ಎಚ್‌. ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next