ಚಳ್ಳಕೆರೆ/ಆಳಂದ: ರಾಜ್ಯದ ವಿವಿಧೆಡೆ ಸುರಿದ ಧಾರಾಕಾರ ಮಳೆಗೆ ನದಿಗಳಲ್ಲಿ ನೆರೆ ಬಂದಿದ್ದು, ನೆರೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ವೇದಾವತಿ ನದಿಯಲ್ಲಿ ನೆರೆ ಬಂದಿತ್ತು. ಸೂರನಹಳ್ಳಿ ಗ್ರಾಮದ ನಜೀರ್‌ಸಾಬ್ ಮತ್ತು ಅವರ ಪತ್ನಿ ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಎತ್ತಿನಗಾಡಿಯಲ್ಲಿ ಶನಿವಾರ ಸಂಜೆ ಮನೆಗೆ ಮರಳುತ್ತಿದ್ದರು. ವೇದಾವತಿ ನದಿಯ ರಭಸ ಲೆಕ್ಕಿಸದೆ ಎತ್ತಿನಗಾಡಿಯನ್ನು
ರಸ್ತೆಯಲ್ಲಿ ಇಳಿಸಿದಾಗ ಎತ್ತುಗಳ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಲು ಆರಂಭಿಸಿದರು. ಇದನ್ನು ಕಂಡ ಗಂಗಾಧರ ಮಡಿವಾಳ ಎಂಬ ಯುವಕ ಪ್ರಾಣದ ಹಂಗು ತೊರೆದು ನೀರಿಗಿಳಿದು ರಕ್ಷಣೆಗೆ ಮುಂದಾದ. ಅಕ್ಕಪಕ್ಕದ ಜನರನ್ನು ಸಹಾಯಕ್ಕಾಗಿ ಕೂಗಿ ಕರೆದ. ಸ್ಥಳಕ್ಕೆ ಬಂದ ಗ್ರಾಮಸ್ಥರು ಎಲ್ಲರನ್ನೂ ರಕ್ಷಿಸಿ ದಡಕ್ಕೆ ಕರೆತಂದರು.
ವಿದ್ಯಾರ್ಥಿಗಳ ರಕ್ಷಣೆ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ವಳವಂಡವಾಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 4:30ರ ಸುಮಾರಿಗೆ ಕಣ್ಮಸ್ ಹಳ್ಳದಲ್ಲಿ ನೆರೆ ಬಂದು ವಳವಂಡವಾಡಿ ಗ್ರಾಮದ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿತ್ತು. ಪರಿಣಾಮ ರಾತ್ರಿ 9 ಗಂಟೆಯವರೆಗೂ ವಿದ್ಯಾರ್ಥಿಗಳು ರಸ್ತೆಯ ಮೇಲೆಯೇ ಕಾಯ್ದು ನಿಲ್ಲುವಂತಾಗಿತ್ತು. 8ನೇ ತರಗತಿ ವಿದ್ಯಾರ್ಥಿ ಚನ್ನವೀರ ಚಿಂಚೋಳಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹೇಶ ಅಟ್ಟೂರೆ ಎಂಬುವರು ಹಳ್ಳ ದಾಟಲು ಯತ್ನಿಸಿದಾಗ ನೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು.
ಇದನ್ನು ಗಮನಿಸಿದ ಗ್ರಾಮಸ್ಥರು ಇವರನ್ನು ರಕ್ಷಿಸಿದರು. ಬಳಿಕ, ರಾತ್ರಿ 9 ಗಂಟೆ ಸುಮಾರಿಗೆ ನೀರಿನ ಹರಿವು ಕುಗ್ಗಿದ ಮೇಲೆ ವಿದ್ಯಾರ್ಥಿಗಳು ಮನೆ ಸೇರಿದರು. ಇದೇ ವೇಳೆ, ಶುಕ್ರವಾರ ಸುರಿದ ಮಳೆಗೆ ತಡಕಲ್ ಹಾಗೂ ವಳವಂಡವಾಡಿಯ ಸೇತುವೆಗಳು ಕೊಚ್ಚಿ ಹೋಗಿವೆ.
ಶಿಡ್ಲಘಟ್ಟದಲ್ಲಿ 9 ಸೆಂ.ಮೀ.ಮಳೆ: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ, ಕರಾವಳಿಯ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ರಾಜ್ಯದಲ್ಲಿಯೇ ಅಧಿಕ 9 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ಇಂದೂ ರಾಜ್ಯದಲ್ಲಿ
ಮಳೆ ಸಾಧ್ಯತೆ
ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ, ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ರಾಜ್ಯದ ಒಂದೆರಡು ಕಡೆಗಳಲ್ಲಿ
ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.