Advertisement

ಹೆಚ್ಚಿನ ಪರಿಹಾರಕ್ಕೆ ಉಭಯ ಜಿಲ್ಲೆಗಳ ಆಗ್ರಹ

01:03 AM Sep 09, 2022 | Team Udayavani |

ಉಡುಪಿ/ಮಂಗಳೂರು: ಉಡುಪಿ  ಹಾಗೂ ದ. ಕ. ಜಿಲ್ಲೆಗಳಲ್ಲಿ  ನೆರೆಯಿಂದ 574 ಕೋ.ರೂ. ಹಾನಿಯಾಗಿದೆ.  ಇದನ್ನು ಗಮನಿಸಿ ಮೂಲ ಸೌಕರ್ಯ ಮರುಕಲ್ಪಿಸಲು ಹೆಚ್ಚಿನ ಅನುದಾನ ನೀಡಬೇಕು ಎಂದು ಉಭಯ ಜಿಲ್ಲಾಡಳಿತಗಳು ಕೇಂದ್ರ ಅಧ್ಯಯನ ತಂಡವನ್ನು ಆಗ್ರಹಿಸಿವೆ.

Advertisement

ಕೇಂದ್ರ ಅಧ್ಯಯನ ತಂಡ ಮಳೆ ಹಾನಿ ವೀಕ್ಷಣೆಗೆ ಉಭಯ ಜಿಲ್ಲೆಗಳ ಕೆಲವು ಸ್ಥಳಗಳಿಗೆ ಭೇಟಿ ನೀಡಿತು.

ಉಡುಪಿ ಜಿಲ್ಲೆಯಲ್ಲಿ 263.91 ಕೋ.ರೂ. ಮೌಲ್ಯದ ಮೂಲಸೌಕ ರ್ಯಗಳಿಗೆ ಹಾನಿಯಾಗಿದೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ, ಮೀನುಗಾರಿಕೆ, ಕೃಷಿ ಮತ್ತು ಪ್ರವಾ ಸೋದ್ಯಮಕ್ಕೆ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ಒದಗಿಸುವಂತೆ ಜಿಲ್ಲಾಡಳಿತ  ಕೋರಿತು.

ಡಿಸಿ ಎಂ. ಕೂರ್ಮಾರಾವ್‌ ಅವರು, ಮಳೆ/ ಪ್ರವಾಹಕ್ಕೆ ಇಬ್ಬರು ಮೃತಪಟ್ಟು, 65 ಮನೆಗಳಿಗೆ ಪೂರ್ಣ, 424ಕ್ಕೆ ಭಾಗಶಃ ಹಾನಿಯಾಗಿವೆ. 1239.73 ಹೆಕ್ಟೇರ್‌ನಷ್ಟು ಬೆಳೆಹಾನಿ ಉಂಟಾಗಿದೆ. 41.8 ಕಿ.ಮೀ. ರಾ.ಹೆ., 56.98 ಕಿ.ಮೀ. ಜಿಲ್ಲಾ ರಸ್ತೆ, 194 ಕಿ.ಮೀ. ನಗರ ರಸ್ತೆ, 1,379.95 ಕಿ.ಮೀ. ಗ್ರಾಮೀಣ ರಸ್ತೆ ಹಾಳಾಗಿದೆ. ಕಡಲ್ಕೊರೆತದ ಹಾಗೂ ಇತರ ಹಾನಿಗಳ ಬಗ್ಗೆ ಮಾಹಿತಿ ಪಡೆದ ಕೇಂದ್ರ ತಂಡವು ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿತು.

120ಕ್ಕೂ ಹೆಚ್ಚು ಸೇತುವೆಗಳು, 1,699 ವಿದ್ಯುತ್‌ ಕಂಬಗಳು ಬಿದ್ದಿವೆ. 335 ಟ್ರಾನ್ಸ್‌ಫಾರಂ ಹಾಳಾಗಿವೆ. 235 ಶಾಲಾ ಕಟ್ಟಡಗಳು, 78 ಮೀನುಗಾರಿಕೆ ದೋಣಿಗಳು, 90ಕ್ಕೂ ಹೆಚ್ಚು ಮೀನು ಬಲೆಗಳು ಹಾನಿಯಾಗಿವೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಳೆ/ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಹಾರಕ್ಕೆ ಕೇಂದ್ರದಿಂದ ವಿಶೇಷ ಅನುದಾನ ಒದಗಿಸಲು ಡಿಸಿ ಮನವಿ ಮಾಡಿದರು.

Advertisement

ಆಪದ್‌ ಮಿತ್ರರ ಸೇವೆ :

ಉಡುಪಿ ಜಿಲ್ಲಾಡಳಿತವು ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನು ರಾಜ್ಯದಲ್ಲೇ ಉತ್ತಮ ರೀತಿಯಲ್ಲಿ ರೂಪಿಸಿದೆ. 300ಕ್ಕೂ ಹೆಚ್ಚು ಆಪದ್‌ ಮಿತ್ರ ಸ್ವಯಂ ಸೇವಕರಿಗೆ ಹಾಗೂ 180ಕ್ಕೂ ಹೆಚ್ಚು ನೆಹರೂ ಯುವಕೇಂದ್ರದ ಸ್ವಯಂ ಸೇವಕರನ್ನು ನೆರೆ ಸಂದರ್ಭದಲ್ಲಿ ಬಳಸಿಕೊಂಡು ತತ್‌ಕ್ಷಣ ಪರಿಹಾರ ಕಾರ್ಯ ಆಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚೀಂದ್ರ, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ್‌ ಕುಮಾರ್‌, ಭವ್ಯಾ ಪಾಂಡೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ಉಪಸ್ಥಿತರಿದ್ದರು.

ಆಶೀಶ್‌ ಕುಮಾರ್‌ ಸಲಹೆ :

ರೈತರು ಬೆಳೆಯುವ ಪ್ರತಿ ಬೆಳೆ ಹಾಗೂ ಮೀನುಗಾರಿಕೆ ದೋಣಿ, ಪರಿಕರಗಳನ್ನು ವಿಮಾ ವ್ಯಾಪ್ತಿಗೆ ತರಲು ಪ್ರೋತ್ಸಾಹಿಸಬೇಕು. ಪ್ರಧಾನ ಮಂತ್ರಿ ಫ‌ಸಲ್‌ ಭಿಮಾ ಯೋಜನೆ ಸೇರಿದಂತೆ ಮತ್ತಿತರ ಬೆಳೆ ವಿಮೆ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕಡ್ಡಾಯವಾಗಿ ವಿಮೆ ಮಾಡಿಸಲು ಮುಂದಾಗಬೇಕು. ವಿಮೆ ನೋಂದಣಿಯಿಂದ ಬೋಟ್‌ಗಳಿಗೆ ನಷ್ಟ ಉಂಟಾದಾಗ ಹೆಚ್ಚಿನ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ  ಎಂದು ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್‌ ಕುಮಾರ್‌ ಅವರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

 ಮರವಂತೆ : ಕಡಲ್ಕೊರೆತ ಪರಿಶೀಲಿಸಿದ ಕೇಂದ್ರ ತಂಡ :

ಕುಂದಾಪುರ: ಮರವಂತೆಯಲ್ಲಿ ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಕ್ಕೆ ಕೇಂದ್ರ ತಂಡವು ಭೇಟಿ ನೀಡಿ ಕಡಲ್ಕೊರೆತದಿಂದಾಗಿ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿ, ಮಾಹಿತಿ ಪಡೆಯಿತು. ಈ ವೇಳೆ ಇಲ್ಲಿನ ಮೀನುಗಾರರು ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಇದೇ ವೇಳೆ ತಂಡವು ಉಪ್ಪುಂದದ ಅಮ್ಮನವರ ತೋಪುÉ ಶಾಲೆ ಹಾಗೂ ಶಿರೂರಿನ ಕಳಿಹಿತ್ಲುವಿನಲ್ಲಿ ದೋಣಿಗಳಿಗೆ ಹಾನಿಯಾದ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸಿತು. ಕೇಂದ್ರ ತಂಡದಲ್ಲಿ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ್‌ ಕುಮಾರ್‌, ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚೀಂದ್ರ, ಕುಂದಾಪುರ ಎಸಿ ಕೆ. ರಾಜು, ಬೈಂದೂರು ತಹಶೀಲ್ದಾರ್‌ ಕಿರಣ್‌ ಜಿ. ಗೌರಯ್ಯ, ಉಪ ತಹಶೀಲ್ದಾರ್‌ ಭೀಮಪ್ಪ, ಡಿವೈಎಸ್‌ಪಿ ಶ್ರೀಕಾಂತ್‌, ಎಸ್‌ಐ ವಿನಯ್‌, ಮರವಂತೆ ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್‌ ಖಾರ್ವಿ, ಸದಸ್ಯರು, ಮೀನುಗಾರ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

ಕಡಲ್ಕೊರೆತ ಸೇರ್ಪಡೆಗೆ ಮನವಿ

ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ಮಾತನಾಡಿ, ಕಡಲ್ಕೊರೆತವನ್ನು ಸಹ ಕೇಂದ್ರದ ವಿಪತ್ತು ಪರಿಹಾರ ನಿಧಿಯಡಿ ಸೇರಿಸಲು ರಾಜ್ಯ ಮನವಿ ಸಲ್ಲಿಸಿದೆ. ಮರವಂತೆಯಲ್ಲಿ ನಿರಂತರ ಕಡಲ್ಕೊರೆತ ಆಗುತ್ತಿರುವುದರಿಂದ ಶಾಶ್ವತ ಪರಿಹಾರ ಆಗತ್ಯವಿದೆ. ಈಗಾಗಲೇ ಸಿಎಂ ಸೂಚಿಸಿದಂತೆ ವೇವ್‌ ಬ್ರೇಕರ್‌ ಹಾಗೂ ಡಾಕ್‌ಫುಟ್‌ ಯೋಜನೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇದಲ್ಲದೆ ಪಾಂಡಿಚೇರಿ ಹಾಗೂ ಕೊಲ್ಲಂನಲ್ಲಿ ಹೊಸ ತಂತ್ರಜ್ಞಾನ ಮಾದರಿಯ ಕಡಲ್ಕೊರೆತ ತಡೆ ಕ್ರಮಕೈಗೊಂಡಿದ್ದು, ಅದರ ಬಗ್ಗೆಯೂ ಅಧ್ಯಯನ ಮಾಡಲಾಗುವುದು. ದೋಣಿ, ಮೀನಿನ ಬಲೆ ಹಾನಿಗೂ ಹೆಚ್ಚಿನ ಪರಿಹಾರಕ್ಕೆ ಕೇಂದ್ರ ತಂಡಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅತಿವೃಷ್ಟಿಯಿಂದ ಹಾನಿ: ಕೇಂದ್ರ ತಂಡದಿಂದ ಪರಿಶೀಲನೆ :

ಮಂಗಳೂರು: ಅತಿವೃಷ್ಟಿ ಹಾನಿ ಅಧ್ಯ ಯನಕ್ಕಾಗಿ ಕೇಂದ್ರ ಸರಕಾರದ ಅಂತರ್‌ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಗುರುವಾರ  ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಹಾನಿಗೀಡಾದ ಕಡಲ ತೀರ, ರಸ್ತೆ, ಸೇತುವೆ, ಮನೆಗಳನ್ನು ಪರಿಶೀಲಿಸಿತು.

ಜಿಲ್ಲೆಯಲ್ಲಿ ಜುಲೈಯಿಂದ ಸುರಿದ ತೀವ್ರ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು,  ಮೂಲ ಸೌಕರ್ಯಗಳು, ಬೆಳೆ, ಮಾನವ ಹಾಗೂ ಜಾನುವಾರುಗಳ ಜೀವ ಹಾನಿ ಕುರಿತು ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಡಾ|  ರಾಜೇಂದ್ರ ಕೆ.ವಿ. ಅವರು ಮಾಹಿತಿ ನೀಡಿದರು. ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ಪರಿಹಾರಕ್ಕಾಗಿ ಒಟ್ಟು 311 ಕೋಟಿ ರೂ.ಗಳ ಪರಿಹಾರಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು  ತಂಡಕ್ಕೆ  ವಿವರಿಸಿದರು.

ತಂಡವು ತೀವ್ರ  ಕಡಲ್ಕೊರೆತ ಉಂಟಾಗಿರುವ ಉಳ್ಳಾಲದ ಬಟಪ್ಪಾಡಿಗೆ ತೆರಳಿ ಅವಲೋಕಿಸಿತು. ರಸ್ತೆ ಹಾನಿ, ಕಡಲ್ಕೊರೆತದಿಂದಾದ ಹಾನಿ ವೀಕ್ಷಿಸಿದ ತಂಡದ ಸದಸ್ಯರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಅನಂತರ  ಹೊಸಬೆಟ್ಟು-ಮೀನಕಳಿಯಕ್ಕೆ ತೆರಳಿದ ಅವರು ಕಡಲ್ಕೊರೆತ, ರಸ್ತೆ ಹಾನಿ, ತೀವ್ರ ಮಳೆಯಿಂದಾಗಿ ಮನೆಗಳಿಗಾದ ಹಾನಿ ಸೇರಿದಂತೆ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯತ್‌ ಸಿಇಒ ಡಾ| ಕುಮಾರ್‌, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ ಮೋಹನ್‌, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ, ತಹಶೀಲ್ದಾರ್‌ ಪುಟ್ಟರಾಜ್‌, ಜಿಲ್ಲಾ ವಿಪತ್ತು ನಿರ್ವಹಣ ಪರಿಣತ ವಿಜಯ್‌ ಕುಮಾರ್‌ ಪೂಜಾರ್‌ ಸಹಿತ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next