Advertisement

ಕರಾವಳಿಯಲ್ಲಿ ಮುಂದುವರಿದ ಮಳೆ

09:47 AM Oct 06, 2018 | |

ಮಂಗಳೂರು/ ಉಡುಪಿ: ಅರಬಿ ಸಮುದ್ರದಲ್ಲಿ ಏರ್ಪಟ್ಟಿರುವ ನಿಮ್ನ ಒತ್ತಡದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಶುಕ್ರವಾರವೂ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಗ್ರಾಮಾಂತರ ಪ್ರದೇಶದ ಕೆಲವು ಕಡೆಗಳಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆ ಆಗಿದೆ.

Advertisement

ಮಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ಉತ್ತಮ ಮಳೆಯಾಗಿತ್ತು. ಉಳಿದಂತೆ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆ, ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುಂಜಾಲಕಟ್ಟೆ, ಮಚ್ಚಿನ, ಮಡಂತ್ಯಾರು, ಬಂಟ್ವಾಳ, ಕಾಸರಗೋಡು, ಕನ್ಯಾನ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.

ಉಡುಪಿ ಜಿಲ್ಲೆ : ಗುಡುಗು ಸಹಿತ ಉತ್ತಮ ಮಳೆ 
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರವೂ ಗುಡುಗು ಸಹಿತ ಮಳೆಯಾಗಿದೆ. ಕಾರ್ಕಳ, ಕುಂದಾಪುರ, ತೆಕ್ಕಟ್ಟೆ, ಬ್ರಹ್ಮಾವರ, ಕಾಪು, ಶಿರ್ವ, ಪಡುಬಿದ್ರಿ, ಬೆಳ್ಮಣ್‌, ಉಡುಪಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ rain, ಸಂಜೆಯ ಅನಂತರ ಉತ್ತಮ ಮಳೆಯಾಗಿದೆ.

ಮಳೆ, ನದಿಗಳಿಗೆ ರಾಡಿ ನೀರು
ಬಂಟ್ವಾಳದಲ್ಲಿ ಶುಕ್ರವಾರ ಸಂಜೆ ಭಾರೀ ಮಳೆ ಸುರಿದಿದೆ. ಮೋಡ ಕವಿದು ಹಗಲು ಹೊತ್ತು ಕತ್ತಲು ಏರ್ಪಟ್ಟಿತ್ತು. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಶುಕ್ರವಾರವೂ ಅಸ್ತವ್ಯಸ್ತಗೊಂಡಿತ್ತು. ಗುರುವಾರ ಸಂಗಬೆಟ್ಟಿನಲ್ಲಿ ಬಿರುಗಾಳಿ ಮಳೆಗೆ ಗೋಳಿಮರವೊಂದು ಬುಡ ಸಹಿತ ಕಿತ್ತು ಬಿದ್ದಿದೆ. ರಾಯಿ ಹೆದ್ದಾರಿಯಲ್ಲಿ ಮರದ ಗೆಲ್ಲು ಬಿದ್ದು ವಿದ್ಯುತ್‌ ಕಂಬವೊಂದು ಕುಸಿದಿದೆ. ತಂತಿಗಳು ಕಡಿದು ಬಿದ್ದಿವೆ. 

ಭಾರೀ ಮಳೆಯಿಂದ ಕೆಸರು ಹಲವು ಕಡೆಗಳಲ್ಲಿ ರಸ್ತೆಯಲ್ಲಿ ಹರಿಯುತ್ತಿದ್ದು, ತೆರವು ಮಾಡುವ ಸಮಸ್ಯೆಯನ್ನು ಹಲವಾರು ಗ್ರಾ.ಪಂ.ಗಳು ಎದುರಿಸುತ್ತಿವೆ. ನೇತ್ರಾವತಿ ನದಿಯಲ್ಲಿ ಕೆಸರು ಮಿಶ್ರಿತ ಕೆಂಪು ನೀರು ಹರಿಯುತ್ತಿದೆ. ತುಂಬೆ ಡ್ಯಾಂನಲ್ಲಿ ಹೆಚ್ಚುವರಿ ನೀರನ್ನು ಹರಿಯಬಿಡಲಾಗಿದೆ. ಫಲ್ಗುಣಿ ನದಿಯಲ್ಲೂ ರಾಡಿ ನೀರು ಹರಿಯುತ್ತಿದ್ದು, ಪುಚ್ಚೇರಿ ಸನಿಹ ನಿರ್ಮಿಸಿದ ಮೂಡಬಿದಿರೆಗೆ ನೀರು ಸರಬರಾಜು ಡ್ಯಾಂನಿಂದ ನೀರನ್ನು ಸಂಪೂರ್ಣ ಹೊರಬಿಡಲಾಗಿದೆ. 

Advertisement

ಕಿನ್ನಿಗೋಳಿ: ದೈವಸ್ಥಾನದ ಛಾವಣಿಗೆ ತೆಂಗಿನ ಮರ ಬಿದ್ದು ಹಾನಿ
ಕಿನ್ನಿಗೋಳಿಯಲ್ಲಿ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಕೆಂಚನಕೆರೆಯಲ್ಲಿ ತೆಂಗಿನ ಮರವೊಂದು ತುಂಡಾಗಿ ದೈವಸ್ಥಾನದ ಛಾವಣಿಗೆ ಬಿದ್ದು ಹಾನಿ ಉಂಟಾಗಿದೆ.

ಗಾಳಿ-ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಉಡುಪಿ/ಮಂಗಳೂರು:
ಗಂಟೆಗೆ 32 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಗಾಳಿ ಬೀಸಲಿದ್ದು, ಭಾರೀ ಮಳೆಯೂ ಬರಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ. ಮೀನುಗಾರಿಕೆ ದೋಣಿಗಳು ಕಡಲಿಗೆ ಇಳಿಯಬಾರದು, ಇಳಿದಿದ್ದರೆ ಬಂದರಿಗೆ ಹಿಂದಿರುಗಬೇಕು. ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿಯಿಂದ ಸುಮಾರು 300 ಕಿ.ಮೀ. ದೂರದ ಕಡಲಿನಲ್ಲಿ ಅ. 7ರ ಬೆಳಗ್ಗೆ 11.30ರಿಂದ ಅ. 8ರ ರಾತ್ರಿ 11.30ರವರೆಗೆ 3ರಿಂದ 4.5 ಮೀ. ಎತ್ತರದ ಅಲೆಗಳು ಉಂಟಾಗಲಿವೆ ಎಂದು ಪ್ರಕಟನೆ ತಿಳಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next