Advertisement

ಬಂತು ಮಳೆ, ನದಿಮೂಲಗಳಲ್ಲೀಗ ನೀರ ಸೆಲೆ!

11:09 AM Apr 11, 2018 | Team Udayavani |

ಸುಬ್ರಹ್ಮಣ್ಯ: ಬೇಸಗೆ ಆರಂಭದಲ್ಲೇ ಇದ್ದ ಬರಗಾಲದ ಸುಳಿವು ಈಗ ಮರೆಗೆ ಸರಿದಿದೆ. ಇದಕ್ಕೆ ಕಾರಣ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆ. ಬಳಿಕ ನದಿ, ಹಳ್ಳ, ಕೊಳ್ಳ, ಕೆರೆ ಬಾವಿಗಳಲ್ಲಿ ನೀರಿನ ಮಟ್ಟ ತುಸು ಏರಿಕೆ ಕಂಡಿದ್ದು, ಇದು ಕೃಷಿಕರಿಗೆ ಆಶಾದಾಯಕವಾಗಿದೆ. ಈ ನಡುವೆ, ಹಿಂಗಾರ ಅರಳುವ ಸಮಯದಲ್ಲಿ ಮಳೆ ಬರುತ್ತಿರುವುದು ಹಾನಿಕರ ಎಂಬ ಆತಂಕವೂ ಕೃಷಿಕರನ್ನು ಕಾಡುತ್ತಿದೆ.

Advertisement

ಬೇಸಗೆ ಕಾಲಿಟ್ಟ ಬೆನ್ನಲ್ಲೇ ಬಿಸಿಲಿನ ತಾಪ ತೀವ್ರವಾಗಿತ್ತು. ಕಳೆದ ಬಾರಿಯಂತೆ ಈ ಸಲವೂ ನೀರಿಗೆ ತತ್ವಾರ ಉಂಟಾಯಿತೇ ಎಂದು ರೈತರು ಆತಂಕಗೊಂಡಿದ್ದರು. ಅಲ್ಲಲ್ಲಿ ನೀರಿನ ಅಭಾವದ ಸೂಚನೆ ಕಂಡುಬರುವ ಹೊತ್ತಲ್ಲೇ ಎಪ್ರಿಲ್‌ ತಿಂಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಸದ್ಯದ ಮಟ್ಟಿಗೆ ಇದು ಜಲಮೂಲಗಳಿಗೆ ಸ್ವಲ್ಪ ಶಕ್ತಿ ತುಂಬಿದೆ. ನೀರಿನ ಆಸರೆ ಏರಿಕೆ ಕಂಡಿದೆ. ಇನ್ನು 15 ದಿನ ಕೃಷಿ ಹಾಗೂ ಕುಡಿಯುವ ನೀರಿಗೆ ತಾಪತ್ರಯ ಬಾರದು ಎಂದು ಜನರು ಹೇಳುತ್ತಿದ್ದಾರೆ.

ಹೂವು ಬಿಡುವ ಹೊತ್ತಲ್ಲಿ ಮೋಡ ಆಗುವುದು, ಮಳೆ ಸುರಿಯುವುದು ಅಪಾಯಕಾರಿ ಎಂದು ಕೆಲವು ರೈತರು ಅನುಭವದ ಆಧಾರದಲ್ಲಿ ಹೇಳುತ್ತಿದ್ದಾರೆ. ಅಡಿಕೆ ಹಿಂಗಾರ ಅರಳುವ ಸಮಯವಾಗಿದ್ದು, ಮಳೆ ನೀರು ಹಿಂಗಾರದ ಒಳಗೆ ನಿಂತರೆ ಮುಂದಿನ ಸಲದ ಫ‌ಸಲಿಗೆ ಹಾನಿಯಾಗುತ್ತದೆ. ಸತತ ಮಳೆ ಸುರಿದರೆ ಮಾತ್ರ ಅನುಕೂಲ ಎಂದು ಕೃಷಿ ತಜ್ಞರ ಅಭಿಪ್ರಾಯ.

ತಾಲೂಕಿನ ಪ್ರಮುಖ ನದಿಗಳಾದ ಸುಳ್ಯದ ಪಯಸ್ವಿನಿ ಮತ್ತು ಸುಬ್ರಹ್ಮಣ್ಯದ ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ತುಸು ಹೆಚ್ಚಿದೆ. ಇಳೆ ತಂಪಾಗಿದೆ. ಕೃಷಿ ಚಟುವಟಿಕೆಗೆ, ಕುಡಿಯಲು ನೀರಿಲ್ಲ ಎಂಬ ಆತಂಕವೂ ದೂರವಾಗಿದೆ.

ಎಪ್ರಿಲ್‌ ತಿಂಗಳ ಬಹುತೇಕ ದಿನಗಳಲ್ಲಿ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಎಪ್ರಿಲ್‌ 3ರಿಂದ 8ರ ತನಕ ತಾಲೂಕಿನ ಒಂದಲ್ಲ ಒಂದು ಕಡೆ ಮಳೆಯಾಗುತ್ತಲೆ ಇತ್ತು. ಎ. 8ರಂದು ದೊಡ್ಡ ಗಾತ್ರದ ಆಲಿಕಲ್ಲುಗಳ ಸಹಿತ ಮಳೆಯಾಗಿತ್ತು. ಕೊಲ್ಲಮೊಗ್ರುವಿನಲ್ಲಿ 52 ಮಿ.ಮೀ. ಮಳೆ ಸುರಿದಿತ್ತು. ತಾಲೂಕಿನಲ್ಲಿ ಸರಾಸರಿ 35 ಮಿ.ಮೀ. ಮಳೆಯಾಗಿತ್ತು. ಮಳೆಯ ಬಳಿಕ ಈಗಲೂ ಸೆಕೆಯ ಅನುಭವವೇ ಇದೆ. ಮಧ್ಯಾಹ್ನದ ತನಕ ಉರಿ ಬಿಸಿಲು. ಸಂಜೆಯಾಗುತ್ತಲೇ ಮೋಡ ಕವಿಯುತ್ತದೆ. ಸೋಮವಾರ, ಮಂಗಳವಾರ ಮಳೆಯಾಗದೆ ಮತ್ತೆ ನೆತ್ತಿ ಸುಡುವಂಥ ಬಿಸಿಲಿದೆ.

Advertisement

ಸುಳ್ಯ ಜನರ ಕುಡಿಯುವ ನೀರಿನ ಮೂಲವಾದ ಪಯಸ್ವಿನಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ, ನಗರದ ಜನರು ಹಾಗೂ ಕೃಷಿಕರು ಕೊಂಚ ನಿರಾಳರಾಗಿದ್ದಾರೆ. ಪುಣ್ಯಸ್ನಾನಕ್ಕೂ ನೀರಿನ ಕೊರತೆ ಎದುರಾಗುವ ಆತಂಕದಲ್ಲಿದ್ದ ಕುಮಾರಧಾರೆಯಲ್ಲೂ ನೀರಿನ ಮಟ್ಟ ಸಮೃದ್ಧವಾಗಿದೆ. ಬಾವಿ, ಕೆರೆ, ತೋಡುಗಳು ಬತ್ತುವ ದಿನಗಳೂ ಕೊಂಚ ಮುಂದಕ್ಕೆ ಹೋದಂತಾಗಿದೆ. ಕೃಷಿ ಹಾಗೂ ಕುಡಿಯುವ ನೀರು ಮಾತ್ರವಲ್ಲದೆ ಸಸ್ಯರಾಶಿಗಳು, ಪ್ರಾಣಿ ಸಂಕುಲಗಳೂ ನೆಮ್ಮದಿಯಿಂದ ಉಸಿರಾಡುತ್ತಿವೆ.

ಹಾನಿಕಾರಕ
ಈಗ ಸುರಿದ ಮಳೆಯಿಂದ ಕೃಷಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಿಂಗಾರ ಅರಳುವ ಸಮುಯದಲ್ಲಿ ಮಳೆ ಬಂದಾಗ ಹಿಂಗಾರದ ಒಳಗೆ ನೀರಿನ ಹನಿ ನಿಂತು ಬೆಳೆಗೆ ಹಾನಿ ಉಂಟಾಗುತ್ತದೆ. ಫ‌ಸಲು ನಷ್ಟದ ಭೀತಿ ಇದೆ.
ಕೃಷ್ಣಪ್ರಸಾದ ಮಡ್ತಿಲ,
  ಕ್ಯಾಂಪ್ಕೋ ನಿರ್ದೇಶಕರು 

ಸದ್ಯ ಸಮಸ್ಯೆಯಿಲ್ಲ
ಮೂರ್‍ನಾಲ್ಕು ದಿನ ನಿರಂತರವಾಗಿ ಮಳೆ ಸುರಿದಿದ್ದರಿಂದ ಇಳೆ ತಂಪಾಗಿದೆ. ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹದಿನೈದು ದಿನದ ಮಟ್ಟಿಗೆ ಕೃಷಿಗೆ, ಕುಡಿಯಲು ನೀರಿನ ಅಭಾವ ಕಂಡುಬಾರದು.
ಜಯಪ್ರಕಾಶ ಕೂಜುಗೋಡು,
  ಸಾವಯವ ಕೃಷಿಕ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next