Advertisement

ಕರಾವಳಿಯಾದ್ಯಂತ ಮಳೆ ವಿರಾಮ: ಕೃಷಿಕರ ಮೊಗದಲ್ಲಿ ಹರ್ಷ

12:52 AM Oct 24, 2022 | Team Udayavani |

ಮಂಗಳೂರು: ಕಳೆದ ಕೆಲವು ದಿನಗಳಿಂದ ಒಂದಲ್ಲ ಒಂದು ಕಡೆ ಯಲ್ಲಿ ಸುರಿಯುತ್ತಿದ್ದ ಮಳೆ ರವಿವಾರ ಕರಾವಳಿಯಾದ್ಯಂತ ವಿರಾಮ ಪಡೆದಿತ್ತು.

Advertisement

ದ.ಕ. ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ಹಗಲಿನಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣ ಇತ್ತು. ಸೆಕೆಯೂ ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಹೆಚ್ಚಿತ್ತು.

ಒಂದು ವಾರದಿಂದ ಅಪರಾಹ್ನದ ಬಳಿಕ  ಸಿಡಿಲು ಸಹಿತ ಮಳೆಯಾ ಗುತ್ತಿತ್ತು. ಸಿಡಿಲಿನ ಅಬ್ಬರದಿಂದ ಕೆಲವೆಡೆ ಹಾನಿಯೂ ಆಗಿತ್ತು.

ಕೃಷಿಕರ ಮೊಗದಲ್ಲಿ ಹರ್ಷ
ದೀಪಾವಳಿಗೆ ಪೂರ್ವವಾಗಿ ಮಳೆ ವಿರಾಮ ನೀಡಿದ್ದರಿಂದ ಕೃಷಿಕರಲ್ಲಿ ಮತ್ತು ವ್ಯಾಪಾರಿ ವಲಯದಲ್ಲಿ ಹರ್ಷ ಮೂಡಿದೆ. ಮುಖ್ಯವಾಗಿ ಭತ್ತ ಕೃಷಿಕರು ಹರ್ಷಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆ, ಮಳೆಗಾಲ ಆರಂಭದಲ್ಲಿಯೇ ಬಿತ್ತನೆ ಮಾಡಿರುವ ಭತ್ತದ ಫ‌ಸಲು ಕೊಯ್ಲಿನ ಹಂತಕ್ಕೆ ಬಂದಿತ್ತು. ಆದರೆ ಇದೇ ಸಮಯದಲ್ಲಿ ಮಳೆಯೂ ಮುಂದುವರಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಸಿಗಲಾರದೇನೊ ಎಂಬ ಆತಂಕ ಮನೆ ಮಾಡಿತ್ತು. ಈಗ ಮಳೆ ವಿರಾಮ ನೀಡಿರುವುದರಿಂದ ಕೊಯ್ಲು ಕಾರ್ಯ ರಭಸ ಪಡೆದಿದೆ. ಕೊಯ್ಲು ಆಗದೆ ದೀಪಾವಳಿ ದಿನ ಗದ್ದೆಗೆ ದೀಪ ಇಡುವುದು ಹೇಗೆ ಎಂಬ ಆತಂಕವನ್ನು ಹೊಂದಿದ್ದರು. ರವಿವಾರವಂತೂ ಹೆಚ್ಚಿನ ಕಡೆಗಳಲ್ಲಿ ಕೊಯ್ಲು ಕಂಡುಬಂತು.

Advertisement

ಸಾಲು ಸಾಲು ಯಂತ್ರಗಳು
ಮಳೆ ವಿರಾಮ ಪಡೆದ ಕೂಡಲೇ ಎಲ್ಲೆಡೆ ರೈತರು ಕೊಯ್ಲಿಗೆ ಮನಸ್ಸು ಮಾಡುವುದನ್ನು ಅಂದಾಜು ಮಾಡಿದ್ದ ಬೇರೆ ಜಿಲ್ಲೆಯ ಕಟಾವು ಯಂತ್ರಗಳು ಕಳೆದ ಶುಕ್ರವಾರವೇ ಕರಾವಳಿಗೆ ಧಾವಿಸಿದ್ದವು. ಶನಿವಾರ ಮತ್ತಷ್ಟು ಯಂತ್ರಗಳು ಆಗಮಿಸಿದ್ದು, ರಾಷ್ಟ್ರೀಯ ಹೆದ್ದಾರಿ ಬದಿ ಸಾಲು ಸಾಲಾಗಿ ವಾಹನಗಳು ಕಂಡು ಬಂದವು.

ದುಬಾರಿ ಬೆಲೆ
ಸಾಕಷ್ಟು ಯಂತ್ರಗಳು ಆಗಮಿಸಿ ದ್ದರೂ ದುಬಾರಿ ಬಾಡಿಗೆ ಹೇಳುತ್ತಿ ರುವುದು ರೈತರಿಗೆ ಸಮಸ್ಯೆಯಾಗಿದೆ. ಹೆಚ್ಚಿನವರು ಮಳೆ ಬರಬಹುದೇನೋ ಎಂಬ ಭೀತಿಯಿಂದ ಸಿಕ್ಕಿದ ಯಂತ್ರಗಳನ್ನು ಕೊಂಡೊಯ್ಯುವ ಸ್ಥಿತಿಯಲ್ಲಿದ್ದು, ಹೆಚ್ಚು ಬಾಡಿಗೆ ನೀಡಿ ಕಟಾವು ನಡೆಸುತ್ತಿದ್ದಾರೆ.

ಕನಿಷ್ಠ 3 ದಿನ ಮಳೆ ವಿರಾಮ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನು ಕನಿಷ್ಠ ಮೂರು ದಿನ ಕರಾವಳಿಯಾದ್ಯಂತ ಒಣ ಹವೆ ಇರಲಿದೆ. ಅ. 27ರ ಬಳಿಕವಷ್ಟೇ ಮತ್ತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಮಾನ ನಿಲ್ದಾಣ ದಲ್ಲಿ ರವಿವಾರ 32 ಡಿ.ಸೆ. ಗರಿಷ್ಠ ಮತ್ತು 24 ಡಿ.ಸೆ. ಕನಿಷ್ಠ ಉಷ್ಣಾಂಶ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next