Advertisement

Rain ಬೆಳ್ತಂಗಡಿ: ಕೃಷಿ, ರಸ್ತೆ ಸಹಿತ ಮನೆಗಳಿಗೆ ಹಾನಿ

11:52 PM Dec 11, 2023 | Team Udayavani |

ಬೆಳ್ತಂಗಡಿ: ತಾಲೂಕಿನೆಲ್ಲೆಡೆ ರವಿವಾರ ರಾತ್ರಿ ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಕೃಷಿ, ರಸ್ತೆ, ಮನೆಗೆ ಹಾನಿಯಾಗಿದೆ.

Advertisement

ಸಂಜೆ 6.30ರ ಸುಮಾರಿಗೆ ಆರಂಭವಾದ ಮಳೆ ಸುಮಾರು ಎರಡು ತಾಸು ಕಾಲ ಎಡೆಬಿಡದೆ ಸುರಿಯಿತು. ಹಲವೆಡೆ ಕೊçಲಿನ ಅಡಿಕೆ ಒದ್ದೆಯಾಗಿದೆ. ಕೆಲವು ಕಡೆಗಳಲ್ಲಿ ಅಂಗಳ ಮತ್ತು ತೋಟದಿಂದ ಮಳೆ ನೀರಿನಲ್ಲಿ ಅಡಿಕೆ ತೇಲಿ ಹೋಗಿ ನಷ್ಟ ಉಂಟಾಗಿದೆ. ಗಾಳಿಗೆ ನೂರಾರು ಅಡಿಕೆ ಮರ, ಬಾಳೆ ಗಿಡಗಳು ಧರಾಶಾಯಿಯಾಗಿವೆ.

ಬೆಳಾಲು ಗ್ರಾಮದ ಆಲಡ್ಕ ವಸಂತ ಆಚಾರ್ಯ ಅವರ ಮನೆಗೆ ಸಿಡಿಲು ಬಡಿದು ಪಂಪ್‌, ವಿದ್ಯುತ್‌ ವೈರಿಂಗ್‌ ಸುಟ್ಟು ಹೋಗಿದೆ. ಮನೆಯ ಸಿಟ್‌ ಔಟ್‌ ಹಾಗೂ ತೆಂಗಿನ ಮರಕ್ಕೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ವಿದ್ಯುತ್‌ ಉಪಕರಣಗಳಿಗೂ ಹಾನಿಯಾಗಿದೆ. ಮೊದಲೇ ಹದ್ದಗೆಟ್ಟಿರುವ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮಳಿಗೆಯವರು ಮಳೆಯಿಂದ ತೊಂದರೆ ಅನುಭವಿಸಿದರು.

ಮನೆ ಮೇಲೆ ಬಿದ್ದ ಮರ
ಮುಂಡಾಜೆ ಗ್ರಾಮದ ಒಂಜರೆಬೈಲು ಸೀತಾ ಅವರ ಮನೆಗೆ ಬೃಹತ್‌ ಗಾತ್ರದ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್‌ ಮನೆ ಮಂದಿಗೆ ಅಪಾಯ ಸಂಭವಿಸಿಲ್ಲ.ಸ್ಥಳಕ್ಕೆ ಮುಂಡಾಜೆ ವಿಎ ರಣಿತಾ, ತಾ.ಪಂ. ಸಂಯೋಜಕ ಜಯಾನಂದ ಲಾೖಲ, ಗ್ರಾ.ಪಂ. ಅಧ್ಯಕ್ಷ ಗಣೇಶ ಬಂಗೇರ ಭೇಟಿ ನೀಡಿದರು. ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಮರ ತೆರವು ಹಾಗೂ ಇನ್ನಿತರ ಕೆಲಸಗಳನ್ನು ನಡೆಸಿ ಕೊಟ್ಟಿದ್ದಾರೆ. ಮನೆ ಮಂದಿ ಪಕ್ಕದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಹೆದ್ದಾರಿ ಸಂಚಾರ ಸಮಸ್ಯೆ
ರಾ. ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮಳೆಯಿಂದ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅಗೆದು ಹಾಕಿರುವ ಮಣ್ಣು ರಸ್ತೆಗೆ ಹರಿದು ಬಂದು ರಸ್ತೆಯು ಸಂಪೂರ್ಣ ಕೆಸರುಮಯವಾಗಿತ್ತು. ಲಘು ವಾಹನ ಸವಾರರು ಪರದಾಡುವಂತಾಯಿತು. ಟ್ರಾಫಿಕ್‌ ಜಾಮ್‌ ಸಮಸ್ಯೆಯು ಕಂಡು ಬಂತು.ಮುಂಡಾಜೆ ಗ್ರಾಮದ ಸೋಮಂತಡ್ಕದ ಹೆದ್ದಾರಿಯಲ್ಲಿ ಸಿಮೆಂಟ್‌ ಸಾಗಾಟದ ಲಾರಿ ಹೆದ್ದಾರಿಯಿಂದ ಅಂಗಡಿಗೆ ತಿರುವು ಪಡೆಯುತ್ತಿದ್ದ ವೇಳೆ ಕೆಸರಲ್ಲಿ ಹೂತು ಹೋಯಿತು.

Advertisement

ಗ್ರಾಮೀಣ ಭಾಗದಲ್ಲಿ ಮಳೆ
ಮಂಗಳೂರು: ಸುಳ್ಯ, ಕಡಬ ತಾಲೂಕಿನ ಕೆಲವೆಡೆ ಸೋಮವಾರ ಹನಿ ಮಳೆಯಾಗಿದ್ದು, ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರುವಿನಲ್ಲಿ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು.

ಮಂಗಳೂರು ನಗರದಲ್ಲಿಯೂ ಬೆಳಗ್ಗಿನ ಅವಧಿಯಲ್ಲಿ ಮೋಡಕವಿದ ವಾತಾವರಣವಿತ್ತು. ಹೊತ್ತೇರುತ್ತಿದ್ದಂತೆ ಬಿಸಿಲು ಕಾಣಿಸಿಕೊಂಡಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 31.4 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಆವರಣಗೋಡೆ ಕುಸಿತ
ರವಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಬೊಳು³ಗುಡ್ಡೆ ರಸ್ತೆಯ ವಾದಿರಾಜ ಅವರ ಮನೆಯ ಆವರಣ ಗೋಡೆ ಜರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಮನೆಗೂ ಅಪಾಯ ಭೀತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next