Advertisement

ವರ್ಷದ ಮೊದಲ ಮಳೆ : ಮಂಗಳೂರು ನಗರದ ವಿವಿಧೆಡೆ ನೀರು ನಿಂತು ಅವಾಂತರ

01:17 PM Mar 10, 2022 | Team Udayavani |

ಮಹಾನಗರ : ಮಂಗಳೂರು ನಗರ, ನಗರದ ಹೊರ ವಲಯದಲ್ಲಿ ಬುಧವಾರ ಬೆಳಗ್ಗೆ ಸಾಧಾರಣ ಮಳೆ ಸುರಿದಿದೆ. ಸುಮಾರು 3 ತಿಂಗಳುಗಳ ಬಳಿಕ ಸುರಿದ ಈ ಮೊದಲ ಮಳೆಯ ಪರಿಣಾಮ ನಗರದಲ್ಲಿ ಕೆಲವೊಂದು ಅವಾಂತರಗಳು ಸಂಭವಿಸಿವೆ.

Advertisement

ಮಳೆ ನೀರು ಸರಾಗವಾಗಿ ಹರಿಯಲು ಅವಕಾಶ ಇಲ್ಲದ ಕಾರಣ ಅಂಗಡಿ ಮುಂಗಟ್ಟುಳಿಗೆ, ಕಚೇರಿಗಳ ಆವರಣಕ್ಕೆ ನೀರು ನುಗ್ಗಿದೆ; ರಸ್ತೆ ಮೇಲೆ ಬೃಹತ್‌ ಗಾತ್ರದ ಮರ ಉರುಳಿ ಬಿದ್ದ ಘಟನೆಯೂ ಸಂಭವಿಸಿದೆ.

ಬೆಳಗ್ಗೆ 4.30ರಿಂದ 7 ಗಂಟೆ ತನಕ ಮಂಗಳೂರಿನಾದ್ಯಂತ ಕೆಲವು ಕಡೆ ಉತ್ತಮ, ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ಉತ್ತಮ ಮಳೆ ಬಂದಿದ್ದು, ಇದರಿಂದ ಕೆಲವು ಭಾಗಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.

ಅಂಗಡಿ ಮುಂಗಟ್ಟುಗಳ ಒಳಗೆ ನೀರು
ನಗರದ ಕೆಲವು ಭಾಗಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆ ಯುತ್ತಿದ್ದು, ಮಳೆಯಿಂದಾಗಿ ಈ ಕಾಮಗಾರಿಗೆ ಕೆಲವು ಕಡೆ ತೊಂದರೆ ಉಂಟಾಗಿದೆ. ಚರಂಡಿ, ಪೈಪ್‌ಲೈನ್‌, ಒಳ ಚರಂಡಿ ನಿರ್ಮಾಣ ಇತ್ಯಾದಿ ಕಾಮಗಾರಿಗಾಗಿ ಅಗೆದ ಜಾಗಗಳಲ್ಲಿ ಮಳೆ ನೀರು ತುಂಬಿ ನಿಂತಿತ್ತು. ಬಹಳಷ್ಟು ಕಡೆ ಅಗೆದು ಹಾಕಿದ್ದರಿಂದ ಮಳೆ ನೀರು ಸರಿಯಾಗಿ ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಅಂಗಡಿ ಮುಂಗಟ್ಟುಗಳ ಒಳಗೆ ನೀರು ತುಂಬಿ ಕೊಂಡಿತ್ತು.

Advertisement

ಪುರಭವನದ ಎದುರಿರುವ ಮಿನಿ ವಿಧಾನ ಸೌಧ, ಮಂಗಳೂರು ತಾಲೂಕು ಕಚೇರಿ ಆವರಣಕ್ಕೆ ಮಳೆ ನೀರು ನುಗ್ಗಿತ್ತು. ಕ್ಲಾಕ್‌ ಟವರ್‌ ಬಳಿ ಅಂಗಡಿಯ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಭಾರತ್‌ ಮಾಲ್‌ ಎದುರು ರಸ್ತೆ ತಿರುವಿನಲ್ಲಿ ಮಳೆ ನೀರು ತುಂಬಿ ನಿಂತಿತ್ತು.

ಇದನ್ನೂ ಓದಿ : ನಾಗಮಂಗಲ: ಗ್ರಾಮದೇವತೆ ಹಬ್ಬದಲ್ಲಿ ನಂಗಾನಾಚ್‌; ಅಪ್ರಾಪ್ತನಿಗೆ ಚುಂಬಿಸಿ ಅಶ್ಲೀಲವಾಗಿ ನೃತ್ಯ

ರಸ್ತೆ ಬದಿ ಅಲ್ಲಲ್ಲಿ ಅಗೆದು ಹಾಕಿದ್ದರಿಂದ ಮಣ್ಣಿನ ರಾಶಿಯ ಮೇಲೆ ಮಳೆ ನೀರು ಬಿದ್ದಾಗ ಕೆಸರುಮಯ ವಾತಾವರಣ ಸೃಷ್ಟಿಯಾಗಿ ಕಾಲೂರಿದರೆ ಜಾರುವ ಸ್ಥಿತಿ ನಿರ್ಮಾಣವಾಗಿತ್ತು. ವಾಹನ ಚಾಲಕರು ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಬಹಳಷ್ಟು ಎಚ್ಚರಿಕೆಯಿಂದ ಚಾಲನೆ ಮಾಡ ಬೇಕಾಯಿತು.

ಲಾರಿಯ ಮೇಲೆ ಬಿದ್ದ ಮರ
ಸ್ಟೇಟ್‌ಬ್ಯಾಂಕ್‌- ರೊಜಾರಿಯೊ ರಸ್ತೆಯಲ್ಲಿ ಬಿಎಸ್‌ಎನ್‌ಎಲ್‌ ಕಚೇರಿ ಆವರಣದಿಂದ ಕಾಂಪೌಂಡ್‌, ಭಾರೀ ಗಾತ್ರದ ಮರ ಬುಡ ಸಮೇತ ಉರುಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಮೇಲೆ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕ ಪುರುಷೋತ್ತಮ ಅವರು ಮರ ಬೀಳುತ್ತಿರುವ ಸದ್ದು ಕೇಳಿ ತತ್‌ಕ್ಷಣ ಎಚ್ಚೆತ್ತುಕೊಂಡು ಲಾರಿಯಿಂದ ರಸ್ತೆಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಗೆ ಭಾರೀ ಹಾನಿಯಾಗಿದೆ.

ರೊಜಾರಿಯೊ, ಸೈಂಟ್‌ ಆ್ಯನ್‌ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಮರ ಬೀಳುವ ಸಂದರ್ಭದಲ್ಲಿ ರಸ್ತೆ ಖಾಲಿ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಪಾಂಡೇಶ್ವರ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಸಂಚಾರ ಪಶ್ಚಿಮ ಠಾಣೆಯ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಸಹಕರಿಸಿದರು. ಮೆಸ್ಕಾಂ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ ಮರ ತೆರವು ಕಾರ್ಯಾಚರಣೆ ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next