ಮಂಗಳೂರು/ ಉಡುಪಿ: ಕರಾವಳಿ ಭಾಗದಲ್ಲಿ ಮಳೆ ಮುಂದುವರಿ ಯುವ ಸಾಧ್ಯತೆ ಇದ್ದು, ಮುಂದಿನ 3 ದಿನಗಳ ಕಾಲ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಉಡುಪಿ ಜಿಲ್ಲೆಯ ಹಲವೆಡೆ ಮಂಗಳವಾರ ಧಾರಾಕಾರ ಮಳೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನ ವರೆಗೂ ಬಿಸಿಲು-ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಗುಡುಗು ಸಹಿತ ಕೆಲಕಾಲ ಉತ್ತಮ ಮಳೆಯಾಗಿದೆ.
ಸೋಮವಾರ ತಡರಾತ್ರಿ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಳೆ ಪ್ರಮಾಣ ಕಡಿಮೆ ಇತ್ತು.
ಮನೆಗೆ ಹಾನಿ: ಬ್ರಹ್ಮಾವರದ ಹೇರೂರಿನ ಕೊಳಂಬೆಯಲ್ಲಿ ಅನಿಲ್ ಡಿ’ಸೋಜಾ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಯಿತು.
ಮಂಗಳೂರಿನಲ್ಲಿ 34.1 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ಏರಿಕೆ ಮತ್ತು 23.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.7 ಡಿ.ಸೆ. ಕಡಿಮೆ ಇತ್ತು.
ಕೇರಳ: ಬಿಸಿಲ ಝಳಕ್ಕೆ 112 ಕೋಟಿ ರೂ. ಕೃಷಿ ನಾಶ
ಕಾಸರಗೋಡು: ಬಿಸಿಲ ಝಳಕ್ಕೆ ಕೇರಳದಲ್ಲಿ ಈ ವರಗೆ 112 ಕೋಟಿ ರೂ. ಗಳ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈ ನಷ್ಟದ ಲೆಕ್ಕಾಚಾರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.