Advertisement

ವರುಣ ಕೃಪೆ-ಗರಿಗೆದರಿದ ಕೃಷಿ ಚಟುವಟಿಕೆ

04:08 PM May 27, 2022 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲೇ ಉತ್ತಮ ಮಳೆಯಾಗಿರುವುದು ಅನ್ನದಾತರ ಸಂತಸಕ್ಕೆ ಕಾರಣವಾಗಿದೆ. ವಾಡಿಕೆಗಿಂತ ಉತ್ತಮ ಮಳೆಯಾದ ಪರಿಣಾಮ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಮುಂಗಾರು ಹಂಗಾಮಿಗಾಗಿ ಜಮೀನುಗಳನ್ನು ಹದ ಮಾಡುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

Advertisement

ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕಾರಣ ಗಳಿಂದ ಜಿಲ್ಲಾದ್ಯಂತ ಆಗಾಗ ಉತ್ತಮ ಮಳೆಯಾಗಿದ್ದು, ರೈತರಿಗೆ ಇದು ಕೃಷಿ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಸದ್ಯ ರೈತರು ಹೊಲದತ್ತ ಹೆಜ್ಜೆ ಹಾಕಿದ್ದಾರೆ. ಕುಟುಂಬದ ಎಲ್ಲರೂ ಹೊಲಗಳಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಹೊಲ ಹದ ಮಾಡಿ ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಮಾಡಲು ಅಣಿಯಾಗುತ್ತಿದ್ದಾರೆ.ಅದೇ ರೀತಿ, ಕೃಷಿ ಇಲಾಖೆ ಕೂಡ ಅಗತ್ಯ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದೆ.

3.79 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ 3,30,639 ಹೆಕ್ಟೇರ್‌ ಹಾಗೂ ತೋಟಗಾರಿಕಾ ಬೆಳೆ 45-49 ಸಾವಿರ ಹೆಕ್ಟೇರ್‌ ಸೇರಿದಂತೆ ಒಟ್ಟು 3.79 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದೆ. ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡುವಲ್ಲಿ ಇಲಾಖೆ ನಿರತವಾಗಿದೆ. ಮಳೆ ಮತ್ತು ನೀರಾವರಿ ಆಶ್ರಯದಲ್ಲಿ ಈ ಬಾರಿ 2,04,689 ಹೆಕ್ಟೇರ್‌ ಗೋವಿನಜೋಳ, 53,735 ಹೆಕ್ಟೇರ್‌ ಹತ್ತಿ, 33,715 ಹೆಕ್ಟೇರ್‌ ಭತ್ತ, 19,519 ಹೆಕ್ಟೇರ್‌ ಶೇಂಗಾ, 7,517 ಹೆ. ಸೋಯಾಬಿನ್‌, 801 ಹೆ. ತೊಗರಿ, 567 ಹೆ. ಹೆಸರು ಬೆಳೆಯುವ ಗುರಿ ನಿಗದಿಪಡಿಸಲಾಗಿದೆ.

ಬಿತ್ತನೆ ಬೀಜ ವಿತರಣೆ ಗುರಿ: ಗೋವಿನಜೋಳ 3436 ಸಾವಿರ ಕ್ವಿಂಟಲ್‌, ಭತ್ತ 1500 ಕ್ವಿ, ಜೋಳ 20 ಕ್ವಿ, ತೊಗರಿ 121 ಕ್ವಿ, ಹೆಸರು 34 ಕ್ವಿ, ಶೇಂಗಾ 1200 ಕ್ವಿ, ಸೋಯಾಬಿನ್‌ 9172 ಸಾವಿರ ಕ್ವಿಂಟಲ್‌ ಸೇರಿದಂತೆ 15,483 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಹಂತ ಹಂತ ವಾಗಿ ಬಿತ್ತನೆ ಬೀಜಗಳನ್ನು ಬೇಡಿಕೆಯನುಸಾರ ಪೂರೈಸಲು ಕೃಷಿ ಇಲಾಖೆ ಮುಂದಾಗಿದ್ದು, ಜಿಲ್ಲೆಯ 18 ರೈತ ಸಂಪರ್ಕ ಕೇಂದ್ರಗಳು, 22 ಇಲಾಖಾ ಹೆಚ್ಚುವರಿ ಕೇಂದ್ರಗಳು, 15 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಒಟ್ಟಾರೆ 55 ಬೀಜ ಮಾರಾಟ ಕೇಂದ್ರಗಳಲ್ಲಿ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಗತ್ಯ ಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅದರಲ್ಲೂ ಯೂರಿಯಾ ಗೊಬ್ಬರಕ್ಕೆ ಮುಂಗಾರು ಆರಂಭವಾಗುತ್ತಿದ್ದಂತೆ ಏಕಾಏಕಿ ಬೇಡಿಕೆ ಬರುವುದರಿಂದ ಕೃಷಿ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸದ್ಯ ಯೂರಿಯಾ 10,985 ಟನ್‌, ಡಿಎಪಿ 5,080 ಟನ್‌, ಎಂಒಪಿ 360 ಟನ್‌, ಕಾಂಪ್ಲೆಕ್ಸ್‌ 6422 ಟನ್‌, ಎಸ್‌ಎಸ್‌ಪಿ 88 ಟನ್‌ ಸೇರಿ 22,935 ಟನ್‌ ಗೊಬ್ಬರ ದಾಸ್ತಾನಿದೆ.

Advertisement

ಗುಣ-ಬೆಲೆ ನಿಯಂತ್ರಣ ತನಿಖಾ ತಂಡ ರಚನೆ: ಜಿಲ್ಲೆಯಲ್ಲಿ ಗುಣ ನಿಯಂತ್ರಣ ಹಾಗೂ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಗಳನ್ನು ರಚಿಸಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣ ಹಾಗೂ ಬೆಲೆ ನಿಯಂತ್ರಣ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 124 ಕೃಷಿ ಪರಿಕಠಿl‌ರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, 22 ಮಾರಾಟಗಾರರಿಗೆ ನೋಟಿಸ್‌ ಹಾಗೂ 52 ಮಾರಾಟ ತಡೆಯಾಜ್ಞೆ ನೋಟಿಸ್‌ ಜಾರಿ ಮಾಡಲಾಗಿದೆ. ಮಾರಾಟ ತಡೆಯಾಜ್ಞೆ ನೀಡಿದ ಕೃಷಿ ಪರಿಕರಗಳ ಒಟ್ಟು ಪ್ರಮಾಣ 1250 ಕ್ವಿ. (ಬಿತ್ತನೆ ಬೀಜ), 12 ಟನ್‌ ರಸಗೊಬ್ಬರ ಮತ್ತು 1004 ಕೆಜಿ/ಲೀ. ಕೀಟನಾಶಕ ಸೇರಿ 2.56 ಕೋಟಿಗೆ ತಡೆಯಾಜ್ಞೆ ನೀಡಲಾಗಿದ್ದು, ಕೃಷಿ ಪರಿಕರ ಮಾರಾಟ ಕಾನೂನು ಉಲ್ಲಂಘಿಸಿದ್ದನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ಮಾರಾಟಗಾರರು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಕಡ್ಡಾಯವಾಗಿ ರೈತರಿಗೆ ರಶೀದಿ ನೀಡಬೇಕು. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಹಾಗೂ ಅನಧಿಕೃತವಾಗಿ ಬೀಜ ಮತ್ತು ರಸಗೊಬ್ಬರ, ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿ ಅಮಾನತು-ರದ್ದುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.    –ಮಂಜುನಾಥ. ಬಿ., ಜಂಟಿ ಕೃಷಿ ನಿರ್ದೇಶಕರು, ಹಾವೇರಿ  

-ವೀರೇಶ ಮಡ್ಲೂರ

 

Advertisement

Udayavani is now on Telegram. Click here to join our channel and stay updated with the latest news.

Next