ಚಿತ್ರದುರ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಗುರುವಾರ ತಡರಾತ್ರಿ ಆರಂಭವಾದ ಭಾರೀ ಮಳೆಗೆ ಮನೆಗಳು, ಬೆಳೆಗಳಿಗೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಬರೋಬ್ಬರಿ 110 ಎಕರೆ ಅಡಕೆ, ಬಾಳೆ, ತೆಂಗು, ಈರುಳ್ಳಿ ಮತ್ತಿತರೆ ಬೆಳೆಗಳಿಗೆ ಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 3, ಸೊಂಡೆಕೆರೆ, ಮಲ್ಲಾಡಿಹಳ್ಳಿ ಹಾಗೂ ನಾಯಕನಹಟ್ಟಿಯಲ್ಲಿ ತಲಾ 1 ಮನೆ ಸೇರಿ ಒಟ್ಟು 56 ಮನೆಗಳಿಗೆ ಭಾಗಶಃ ಹಾನಿಗೀಡಾಗಿವೆ. ಚಿತ್ರದುರ್ಗ ನಗರದಲ್ಲಿ 96.8 ಮಿಮೀ ಮಳೆಯಾಗಿದ್ದು, ಗುಮಾಸ್ತರ ಕಾಲೋನಿ, ಭೋವಿ ಕಾಲೋನಿ, ಕೆಳಗೋಟೆ, ಗೋಪಾಲಪುರ ರಸ್ತೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ನಗರದ ಬಿ.ಡಿ. ರಸ್ತೆ, ಹೊಳಲ್ಕೆರೆ ರಸ್ತೆಗಳಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಅಗೆದಿದ್ದ ಜಾಗಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ಚಳಿಗಾಲದ ಅಂತ್ಯಕಾಲಕ್ಕೆ ಸುರಿದ ಅಕಾಲಿಕ ಮಳೆಗೆ ವಾತಾವರಣ ತಂಪಾಗಿತ್ತು. ಇಡೀ ದಿನ ಚಳಿ ಆವರಿಸಿದ್ದರಿಂದ ಮನೆಯಿಂದ ಹೊರ ಬರುವಾಗ ಟೋಪಿ, ಸ್ವೆಟರ್ ಅನಿವಾರ್ಯ ವಾಗಿತ್ತು. ಸಾಕಷ್ಟು ಜನ ಮನೆಯಿಂದ ಹೊರಗೆ ಬರಲೇ ಇಲ್ಲ. ಈಗಾಗಲೇ ಭರ್ತಿಯಾಗಿರುವ ಮಲ್ಲಾಪುರ ಕೆರೆ ರಾತ್ರಿ ಸುರಿದ ಮಳೆಗೆ ಮತ್ತೆ ಕೋಡಿ ಬಿದ್ದಿದೆ. ಕೆರೆ ನೀರು ರಾಷ್ಟ್ರೀಯ ಹೆದ್ದಾರಿ 13 ಹಾಗೂ ಮಲ್ಲಾಪುರ ಗ್ರಾಮದಲ್ಲಿ ಹರಿದು ಅವಾಂತರ ಸೃಷ್ಟಿಸಿತು. ತುರುವನೂರು ರಸ್ತೆಯಲ್ಲಿರುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.
ಜವನಗೊಂಡನಹಳ್ಳಿಯಲ್ಲಿ ಆಲಿಕಲ್ಲು ಮಳೆ: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಮಳೆಯ ಆರ್ಭಟದ ಜೊತೆಗೆ ಆಲಿಕಲ್ಲು ಸುರಿದಿದೆ. ಇದರಿಂದಾಗಿ ಹಲವು ಬೆಳೆಗಳು ಹಾನಿಗೀಡಾಗಿವೆ. ಸಜ್ಜನಕೆರೆಯಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹೊಸದುರ್ಗ ತಾಲೂಕಿನ ದೊಡ್ಡಕರ್ಪೂರದಕಟ್ಟೆ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ಬಾಳೆ ಬೆಳೆ ಧರೆಗುರುಳಿದೆ. ಗ್ರಾಮದ ಶ್ರೀಧರ್, ರಾಘವೇಂದ್ರ ಎಂಬುವವರಿಗೆ ಸೇರಿದ ಬಾಳೆ ಬೆಳೆ ಗಾಳಿ, ಮಳೆಯ ರಭಸಕ್ಕೆ ಸಂಪೂರ್ಣ ಹಾಳಾಗಿದೆ. ಇದರೊಟ್ಟಿಗೆ ತಾಲೂಕಿನ ವಿವಿಧೆಡೆ ತೆಂಗಿನ ಮರಗಳೂ ನೆಲಕ್ಕೆ ಉರುಳಿವೆ.