ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಿಂದ ದೀನ್ ದಯಾಳ್ ಉಪಾಧ್ಯಾಯ ರೈಲ್ವೇ ನಿಲ್ದಾಣದವರೆಗಿನ 417 ಕಿಲೋ ಮೀಟರ್ ದೂರದ ರೈಲ್ವೇ ಮಾರ್ಗದಲ್ಲಿ ಸಿಗ್ನಲ್ ಹಾಗೂ ದೂರಸಂಪರ್ಕ ನೆಟ್ ವರ್ಕ್ ಅನ್ನು ಸ್ಥಾಪಿಸುವ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿದ್ದ ಚೀನಾದ ಕಂಪೆನಿಯ ಗುತ್ತಿಗೆಯನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ.
ಈ ಕಾಮಗಾರಿಗಾಗಿ ಚೀನಾ ಮೂಲದ ಬೀಜಿಂಗ್ ರೈಲ್ವೇ ರಿಸರ್ಚ್ ಆ್ಯಂಡ್ ಡಿಸೈನ್ ಇನ್ ಸ್ಟಿಟ್ಯೂಟ್ ಆಫ್ ಸಿಗ್ನಲ್ ಆ್ಯಂಡ್ ಕಮ್ಯುನಿಕೇಷನ್ ಗ್ರೂಪ್ ಕಂ. ಲಿಮಿಟೆಡ್ ಹೆಸರಿನ ಎಂಜಿನಿಯರಿಂಗ್ ಕಂಪೆನಿ 2016ರಲ್ಲಿ ಗುತ್ತಿಗೆಯನ್ನು ಪಡೆದುಕೊಂಡಿತ್ತು.
ವಿಶ್ವಬ್ಯಾಂಕ್ ನ ಸಾಲದ ಅಡಿಯಲ್ಲಿ ಈ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಗುತ್ತಿಗೆಯಲ್ಲಿನ ನಿಯಮಗಳನ್ನು ಈ ಕಂಪೆನಿಯು ಪಾಲಿಸದೇ ಇದ್ದ ಕಾರಣದಿಂದ ಈ ಕಂಪೆನಿಯ ಗುತ್ತಿಗೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಲಢಾಕ್ ನ ಗಲ್ವಾನ್ ಭಾಗದಲ್ಲಿ ಚೀನಾ ಸೈನಿಕರು 20 ಬಾರತೀಯ ಯೋಧರನ್ನು ಹತ್ಯೆ ಮಾಡಿದ ಘಟನೆಯ ಬಳಿಕ ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದು ಈ ಹಿನ್ನಲೆಯೂ ಸಹ ಈ ಗುತ್ತಿಗೆ ರದ್ದು ವಿಚಾರಕ್ಕೆ ಪುಷ್ಟಿ ನೀಡಿದೆ ಎನ್ನಲಾಗುತ್ತಿದೆ.
ಚೀನಾದ ಈ ಕಂಪೆನಿಯು ಕಾಮಗಾರಿ ಗುತ್ತಿಗೆ ವಹಿಸಿಕೊಂಡ ನಾಲ್ಕು ವರ್ಷಗಳ ಬಳಿಕವೂ ಕೇವಲ 20 ಪ್ರತಿಶತ ಕೆಲಸವನ್ನು ಮಾತ್ರವೇ ಮುಗಿಸಿದೆ ಮತ್ತು ಈ ಮೂಲಕ ಕಂಪೆನಿಯು 471 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ ಎಂದು ರೈಲ್ವೇ ಸಚಿವಾಲಯದ ಮಾಹಿತಿಯನ್ನು ಆಧರಿಸಿ ಇಂಡಿಯಾ ಟುಡೇ ವೆಬ್ ಸೈಟ್ ವರದಿ ಮಾಡಿದೆ.