Advertisement

ರೈಲು ಪ್ರಯಾಣಿಕರ ಅಳಲು: ಇನ್ನೂ ಕೈ ಸೇರಿಲ್ಲ ‘ಮುಂಗಡ ಬುಕ್ಕಿಂಗ್‌’ಹಣ

09:54 AM Jun 10, 2020 | Hari Prasad |

ಕುಂದಾಪುರ: ಲಾಕ್‌ಡೌನ್‌ ಸಮಯದಲ್ಲಿ ರೈಲು ಸಂಚಾರ ರದ್ದಾಗಿದ್ದರಿಂದ ಮುಂಗಡವಾಗಿ (ನಿಲ್ದಾಣದ ಕೋಟಾ ಸೀಟು) ಟಿಕೆಟು ಕಾದಿರಿಸಿದವರಿಗೆ ಮರುಪಾವತಿಸ ಬೇಕಾದ ಹಣ ಮಾತ್ರ ಇನ್ನೂ ಕೈಸೇರಿಲ್ಲ.

Advertisement

ಆನ್‌ಲೈನ್‌ ಬುಕ್ಕಿಂಗ್‌ ಮಾಡಿದವರಿಗೆ ಪಾವತಿಯಾಗಿದ್ದರೂ ನಿಲ್ದಾಣದಲ್ಲಿ ಬುಕ್ಕಿಂಗ್‌ ಮಾಡಿದವರಿಗೆ ಪಾವತಿಸಲು ಬಾಕಿಯಿದೆ.

ಆನ್‌ಲೈನ್‌ ಟಿಕೆಟು ಬುಕ್ಕಿಂಗ್‌ ವ್ಯವಸ್ಥೆ ಇರದ ರೈಲು ನಿಲ್ದಾಣಗಳಲ್ಲಿ ಕೊಂಕಣ ರೈಲ್ವೇ ವತಿಯಿಂದ ಮತ್ಸ್ಯಗಂಧ, ನೇತ್ರಾವತಿ ರೈಲುಗಳಲ್ಲಿ ಪ್ರಯಾಣಿಕರಿಗೆ ಆಯಾಯ ನಿಲ್ದಾಣಕ್ಕಿಷ್ಟು ಎನ್ನುವಂತೆ ಟಿಕೆಟುಗಳನ್ನು ಮುಂಗಡವಾಗಿ ಕಾದಿರಿಸುವ ಅವಕಾಶವಿದೆ. ಆದರೆ ರೈಲು ಸಂಚಾರ ರದ್ದಾಗಿರುವುದಲ್ಲದೆ ಪ್ರಯಾಣದ ಅವಧಿ ಮುಗಿದು ತಿಂಗಳು ಕಳೆದರೂ ಮರುಪಾವತಿ ಆಗಿಲ್ಲ.

ಎಲ್ಲೆಲ್ಲಿ ಕೋಟಾ ಸೀಟು
ಕುಂದಾಪುರದಲ್ಲಿ ಮತ್ಸ್ಯಗಂಧ ರೈಲಿನಲ್ಲಿ ಪ್ರತೀದಿನ 22 ಸ್ಲೀಪರ್‌ ಹಾಗೂ 2 ಎಸಿ ಟಿಕೆಟುಗಳಿವೆ. ನೇತ್ರಾವತಿಯಲ್ಲಿ 4 ಸೀಟು ಕಾದಿರಿಸಬಹುದು. ಕರಾವಳಿ ಜಿಲ್ಲೆಗಳಲ್ಲಿರುವ ರೈಲು ನಿಲ್ದಾಣಗಳ ಪೈಕಿ ಮೂಲ್ಕಿ, ಬಾರ್ಕೂರು, ಬಿಜೂರು, ಮುರ್ಡೇಶ್ವರ, ಅಂಕೋಲಾ, ಹೊನ್ನಾವರಗಳಲ್ಲಿ ಈ ವ್ಯವಸ್ಥೆಯಿದೆ.

ಲಾಕ್‌ಡೌನ್‌ನಿಂದಾಗಿ ಕಳೆದ 3 ತಿಂಗಳಿನಿಂದ ಎಲ್ಲ ರೈಲುಗಳ ಸಂಚಾರ ರದ್ದಾಗಿದ್ದು, ಇದರಿಂದ ಕೊಂಕಣ ರೈಲ್ವೇಗೆ ಆರ್ಥಿಕ ಹೊಡೆತ ಬಿದ್ದಿದೆ. ಅದನ್ನು ಸರಿದೂಗಿಸಲು ಇಲಾಖೆಯು ಈ ಕ್ರಮ ಅನುಸರಿಸುತ್ತಿದೆ ಎನ್ನುವ ಆರೋಪ ಪ್ರಯಾಣಿಕರಿಂದ ವ್ಯಕ್ತವಾಗುತ್ತಿದೆ.

Advertisement

ನಾನು ಎಪ್ರಿಲ್‌ ಹಾಗೂ ಮೇಯಲ್ಲಿ ಕುಂದಾಪುರದಿಂದ ಮುಂಬಯಿಗೆ ಟಿಕೆಟು ಬುಕ್ಕಿಂಗ್‌ ಮಾಡಿದ್ದೆ. ಅಷ್ಟರಲ್ಲಿ ರೈಲು ಪ್ರಯಾಣ ರದ್ದಾಯಿತು. ಹಣ ಮರಳಿಸುವಂತೆ ನಿಲ್ದಾಣಕ್ಕೆ ಹೋಗಿ ಕೇಳಿದರೆ ‘ಈಗ ಸಾಧ್ಯವಿಲ್ಲ, ರೈಲು ಸಂಚಾರ ಆರಂಭವಾಗಲಿ. ಆಗ ಕೊಡುತ್ತೇವೆ’ ಎಂಬ ಉತ್ತರ ಬಂತು ಎಂದು ಇಲ್ಲಿನ ಉದಯ ಭಂಡಾರ್‌ಕರ್‌ ಹೇಳುತ್ತಾರೆ.

ಲಕ್ಷಾಂತರ ರೂ. ಬಾಕಿ?
ದಿನವೊಂದಕ್ಕೆ ಕರಾವಳಿ ಜಿಲ್ಲೆಗಳಲ್ಲಿಯೇ 150ಕ್ಕಿಂತಲೂ ಅಧಿಕ ಮುಂಗಡ ಸೀಟುಗಳಿಗೆ ಬುಕ್ಕಿಂಗ್‌ ವ್ಯವಸ್ಥೆಯಿದ್ದು, ಬೇಸಗೆ ರಜೆ ಸಮಯವಾಗಿದ್ದರಿಂದ ಬಹುತೇಕ ಎಲ್ಲ ಸೀಟುಗಳನ್ನು ಕಾದಿರಿಸಲಾಗಿತ್ತು. ಮಾ. 22ರಿಂದ ಮೇ 31ರ ವರೆಗೆ ಸಾವಿರಾರು ಮಂದಿ ಹೀಗೆ ಬುಕ್ಕಿಂಗ್‌ ಮಾಡಿದ್ದು, ಲಕ್ಷಾಂತರ ರೂ. ಮರಳಿಸಲು ಬಾಕಿಯಿದೆ.

ಬಡ್ಡಿ ಸಹಿತ ತತ್‌ಕ್ಷಣ ನೀಡಿ
ಟಿಕೆಟ್‌ ಹಣ ಪಡೆದು, ರೈಲು ರದ್ದಾದ ಕೂಡಲೇ ಮರುಪಾವತಿ ಮಾಡದಿರುವುದು ಅಪರಾಧ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿರುವವರಿಗೆ ಮರಳಿಸಿ ನಿಲ್ದಾಣಗಳಲ್ಲಿ ಕಾದಿರಿಸಿದವರಿಗೆ ಮಾತ್ರ ಪಾವತಿಸದಿರುವುದು ಸರಿಯಲ್ಲ. ಆ ಹಣದೊಂದಿಗೆ ನಿಗದಿಯಾದ ಪ್ರಯಾಣದ ದಿನದಿಂದ ಈವರೆಗೆ ಬಡ್ಡಿಯನ್ನೂ ಸೇರಿಸಿ ನೀಡಬೇಕು; ಇಲ್ಲದಿದ್ದರೆ ಸಮಿತಿಯಿಂದ ಹೋರಾಟ ಮಾಡಲಾಗುವುದು.
– ವಿವೇಕ್‌ ನಾಯಕ್‌, ಸಂಚಾಲಕರು, ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ

ಎಲ್ಲರಿಗೂ ಟಿಕೆಟು ಹಣ ಮರಳಿಸಲಾಗುತ್ತಿದ್ದು, ಲಾಕ್‌ಡೌನ್‌ನಿಂದಾಗಿ ವಿಳಂಬವಾಗಿದೆ. ಬಾಕಿ ಇರುವ ಬಗ್ಗೆ ಈಗಾಗಲೇ ಮುಂಬಯಿಯ ನಮ್ಮ ಪ್ರಧಾನ ಕಚೇರಿಗೆ ತಿಳಿಸಲಾಗಿದೆ. ಜೂ. 11ರಿಂದ ಮರು ಪಾವತಿಸುವುದಾಗಿ ಅಲ್ಲಿಂದ ಸೂಚನೆ ಬಂದಿದೆ.
– ಕೆ. ಸುಧಾ ಕೃಷ್ಣಮೂರ್ತಿ, ಕೊಂಕಣ ರೈಲ್ವೇ ಮಂಗಳೂರು ವಿಭಾಗದ ಪಿಆರ್‌ಒ

Advertisement

Udayavani is now on Telegram. Click here to join our channel and stay updated with the latest news.

Next