ಕುಂದಾಪುರ: ಹೊಸದಿಲ್ಲಿಯ ರೈಲ್ವೇ ಮಂತ್ರಾಲಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಭಾಗವಹಿಸಿ ಕರಾವಳಿ ಭಾಗದ ರೈಲ್ವೇ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಬೆಳಗ್ಗೆ ನಡೆದ ಸಭೆಯಲ್ಲಿ ಸಚಿವ ಸುರೇಶ್ ಅಂಗಡಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಕೊಂಕಣ ರೈಲ್ವೇ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತ ಭಾಗವಹಿಸಿದ್ದರು. ಕರಾವಳಿಯಲ್ಲಿ ರೈಲ್ವೇ ಯೋಜನೆಯಿಂದ ಜಮೀನು ಕಳೆದುಕೊಂಡ ದ.ಕ. ಮತ್ತು ಉಡುಪಿ ಭಾಗದ ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಧ್ಯಾಹ್ನದ ಸಭೆಯಲ್ಲಿ ಸಂಸದೆ ಶೋಭಾ ಕಾರವಾರಕ್ಕೆ ಬೆಂಗಳೂರಿನಿಂದ ಹೊಸ ರೈಲಿಗೆ ಮನವಿ ಸಲ್ಲಿಸಿದರು. ಈಗಾಗಲೇ ಸಮಿತಿಯು ಬೆಂಗಳೂರು-ಕಾರವಾರ ರೈಲಿನ ವಿಳಂಬ ವೇಳಾಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದರ ಈ ಭೇಟಿ ಫಲಪ್ರದ ಆಗುವ ನಿರೀಕ್ಷೆ ಇದೆ. ಹೊಸ ರೈಲು ಮತ್ತು ವೇಳಾಪಟ್ಟಿಯಲ್ಲಿ ಇರುವ ಗೊಂದಲದ ಬಗ್ಗೆ ಸಚಿವರು, ಸಂಸದರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ ಎಂದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.