Advertisement

ರೈಲೇನೋ ಸಿದ್ಧವಾದರೂ ಹಳಿ ಇನ್ನೂ ತಯಾರಾಗಿಲ್ಲ  

11:30 AM Apr 19, 2017 | Team Udayavani |

ಕದ್ರಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಾಂತ್ಯಕ್ಕೆ ಕದ್ರಿ ಪಾರ್ಕ್‌ನಲ್ಲಿ “ಬಾಲ ಮಂಗಳ ಎಕ್ಸ್‌ಪ್ರೆಸ್‌’ ಓಡಾಟ ಆರಂಭಿಸಬೇಕಿತ್ತು. ಆದರೆ ಪುಟಾಣಿ ರೈಲಿನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೂ, ಹಳಿ ಮಾತ್ರ ಇನ್ನೂ ತುಕ್ಕು ಹಿಡಿದು ಕುಳಿತಿದೆ. ಹೊಸ ರೈಲು ನಿರ್ಮಾಣಗೊಂಡರೂ ಹಳಿ ವಿಸ್ತರಣೆಗೆ ಇನ್ನೂ ಟೆಂಡರ್‌ ಕರೆಯದ ಕಾರಣ ರೈಲು ಸದ್ಯಕ್ಕೆ ಓಡುವುದು ಅನುಮಾನ. 

Advertisement

ಕದ್ರಿ ಪಾರ್ಕ್‌ ಸಹಿತ ರಾಜ್ಯದ ಕೆಲವೇ ಕೆಲವು ಉದ್ಯಾನವನಗಳಲ್ಲಿ ಮಕ್ಕಳ ಮನರಂಜನೆಗಾಗಿ ಈ ರೀತಿಯ ಪುಟಾಣಿ ರೈಲು ಸೇವೆ ಲಭ್ಯವಿತ್ತು. ಆದರೆ ಕದ್ರಿಯಲ್ಲಿದ್ದ “ಬಾಲ ಮಂಗಳ ಎಕ್ಸ್‌ ಪ್ರಸ್‌’ ಪುಟಾಣಿ ರೈಲು ಓಡಾಟ ನಿಲ್ಲಿಸಿ 10 ವರ್ಷ ಕಳೆದಿವೆ. ನಗರವಾಸಿಗಳು ಸುಮಾರು ಒಂದು ದಶಕದಿಂದಲೂ ಇದರ ಪುನರಾಗಮನಕ್ಕೆ ಎದುರು ನೋಡುತ್ತಿದ್ದಾರೆ. ಹಳೆಯ ರೈಲಿನ ಬದಲಿಗೆ ಹೊಸ ಪುಟಾಣಿ ರೈಲು ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿತ್ತು. ಆ ಪ್ರಕಾರ ಎಪ್ರಿಲ್‌ನಲ್ಲಿ ಈ ರೈಲು ಓಡಾಟ ನಡೆಸಲಿದೆ ಎಂಬ ಖುಷಿಯಲ್ಲಿ ಮಕ್ಕಳಿದ್ದರು. 

ಹೊಸ ರೈಲಿನ ನಿರ್ಮಾಣಕ್ಕೆ ರಾಜ್ಯ ಬಾಲ ಭವನ ಸೊಸೈಟಿಯಿಂದ ಕದ್ರಿ ಬಾಲಭವನಕ್ಕೆ ಈಗಾಗಲೇ 91.06 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಮೈಸೂರಿನಲ್ಲಿ ರೈಲನ್ನು ನಿರ್ಮಿಸಲಾ ಗುತ್ತಿದ್ದು, ಬಹುತೇಕ ಕಾರ್ಯ ಪೂರ್ಣ ಗೊಂಡಿದೆ. ರೈಲು ಮೈಸೂರಿನಿಂದ ಸಿಂಗಾರಗೊಂಡು ಕದ್ರಿ ಪಾರ್ಕ್‌ಗೆ ರವಾನೆಯಾಗುವುದಷ್ಟೇ ಬಾಕಿ. ಆದರೆ ಪಾರ್ಕಿನಲ್ಲಿ ಹಳಿ ವಿಸ್ತರಣೆ ಕಾಮಗಾರಿಗೆ ಇನ್ನೂ ಟೆಂಡರ್‌ ಆಗಿಲ್ಲ. ಹೀಗಾಗಿ ರೈಲು ಸದ್ಯಕ್ಕೆ ಓಡದು.

2 ಅಡಿ ಟ್ರ್ಯಾಕ್‌ 
ಈ ಹಿಂದೆ 1.5 ಅಡಿ ಅಗಲದ ಹಳಿ ಮೇಲೆ ರೈಲು ಓಡುತ್ತಿತ್ತು. ಆದರೆ ಹೊಸ ರೈಲಿನ ಗಾತ್ರಕ್ಕನುಗುಣವಾಗಿ ಈಗಿರುವ ಹಳಿಯನ್ನು 2 ಅಡಿ ಅಗಲಕ್ಕೆ ವಿಸ್ತರಿಸ ಬೇಕಿದೆ. ಈಗಿರುವ ಹಳಿ ಕೂಡ ಹಳತಾಗಿ ದ್ದು, ಹೊಸ ಹಳಿ ನಿರ್ಮಾಣ ಕಾಮಗಾರಿಗೆ ಹೆಚ್ಚು ಅವಧಿ ಬೇಕು. ಸದ್ಯ ಹಳಿ ವಿಸ್ತರಣೆ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಆದಾಗ್ಯೂ ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕವಷ್ಟೇ ಕಾಮಗಾರಿ ನಡೆಯಬೇಕು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬಂದಿ.

ಒಂದು ಕೋಟಿ ರೂ. ವೆಚ್ಚ
ಹೊಸ ರೈಲಿನ ನಿರ್ಮಾಣ ಹಾಗೂ ಹಳಿ ಅಳವಡಿಕೆಗೆ ಸುಮಾರು 90 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿತ್ತು. ಇದರೊಂದಿಗೆ ಹಳೆ ಶೆಡ್‌ ಕೆಡವಿ ಪ್ರತ್ಯೇಕ ಶೆಡ್‌ ನಿರ್ಮಾಣಕ್ಕೂ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚ ತಗುಲಲಿದೆ. ಹಳಿ ಮತ್ತು ಶೆಡ್‌ ನಿರ್ಮಾಣ ಕಾಮಗಾರಿಯ ಮೇಲುಸ್ತುವಾರಿಯನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಲಾಗಿದ್ದು, ಈಗಾಗಲೇ ದಕ್ಷಿಣ ರೈಲ್ವೇ ವಲಯದ ಎಂಜಿನಿಯರ್‌ಗಳು ಅಂದಾಜುಪಟ್ಟಿ ತಯಾರಿಸಿ ದ್ದಾರೆ. ಆದರೆ ಟೆಂಡರ್‌ ಪ್ರಕ್ರಿಯೆಯಲ್ಲಿ ಇನ್ನೂ ಯಾರೂ ಪಾಲ್ಗೊಳ್ಳದಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.

Advertisement

3 ಬೋಗಿ ರೈಲು
ಈ ಹಿಂದೆ 1975 ರಲ್ಲಿ ನಿರ್ಮಾಣವಾಗಿ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಓಡುತ್ತಿದ್ದ ರೈಲನ್ನು ಕದ್ರಿ ಪಾರ್ಕ್‌ಗೆ ತಂದು ಮಕ್ಕಳಿಗೆ ರೈಲಿನಲ್ಲಿ ಓಡಾಡುವ ಭಾಗ್ಯ ಕಲ್ಪಿಸಲಾಗಿತ್ತು. ಈ ರೈಲು ಎರಡು ಬೋಗಿಗಳನ್ನಷ್ಟೇ ಹೊಂದಿದ್ದು, ನೂತನ ರೈಲು ಮೂರು ಬೋಗಿಗಳನ್ನು ಒಳಗೊಳ್ಳಲಿದೆ. ಸಿವಿಲ್‌ ಕಾಮಗಾರಿ ಇನ್ನು ಆರಂಭವಾಗಬೇಕಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಹಳಿ ನಿರ್ಮಾಣ ಬಾಕಿ
ಬಾಲ ಮಂಗಳ ಎಕ್ಸ್‌ಪ್ರೆಸ್‌ ರೈಲು ನಿರ್ಮಾಣವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಳಿ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಹಳಿ ನಿರ್ಮಾಣಗೊಂಡ ಬಳಿಕವಷ್ಟೇ ಕದ್ರಿ ಪಾರ್ಕ್‌ನಲ್ಲಿ ಈ ರೈಲು ಓಡಾಟಕ್ಕೆ ಮುಕ್ತವಾಗಲಿದೆ. 
ಸುಂದರ ಪೂಜಾರಿ, ಉಪ ನಿರ್ದೇಶಕ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 

ಖುಷಿಯಾಯಿತು 
ಪುಟಾಣಿ ರೈಲು ಇರುವಾಗ ಮಕ್ಕಳಿಗೆ ಹೆಚ್ಚು ಖುಷಿ ಕೊಡುತ್ತಿತ್ತು. ನಾವೂ ಅದರ ಓಡಾಟವನ್ನು ಸವಿದವರೇ. ರೈಲು ಓಡಾಟ ನಿಂತ ಬಳಿಕ ಪಾರ್ಕ್‌ನಲ್ಲಿ ಮಕ್ಕಳು ಆಟದ ಖುಷಿಯನ್ನು ಕಳೆದುಕೊಂಡದ್ದೇ ಹೆಚ್ಚು. ಈಗ ಮತ್ತೆ ರೈಲು ಓಡಾಡಲಿದೆ ಎಂಬ ಸುದ್ದಿ ಕೇಳಿ ಖುಷಿಯಾಯಿತು. ಆದಷ್ಟು ಬೇಗ ಪುಟಾಣಿ ರೈಲು ಬರಲಿ.
ಪ್ರಫುಲ್ಲಾ ನಾಗೇಶ್‌, ಮೇರಿಹಿಲ್‌

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next