ಮೈಸೂರು: ನಗರದ ಬೋಗಾದಿ ರಸ್ತೆ ಹಾಗೂ ಕೆಆರ್‌ಎಸ್ ರಸ್ತೆಗಳಲ್ಲಿರುವ ಮಾನವಸಹಿತ ರೈಲ್ವೆ ಕ್ರಾಸಿಂಗ್ ತೆರೆವುಗೊಳಿಸಿ, ಆ ಸ್ಥಳದಲ್ಲಿ ಸೇತುವೆ ಹಾಗೂ ಅಂಡರ್‌ಪಾಸ್ ನಿರ್ಮಿಸುವ ಸಂಬಂಧ ಜೂನ್ 10 ರೊಳಗೆ ಹೊಸ ಯೋಜನಾ ವರದಿ ಸಲ್ಲಿಸಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ನಗರದಲ್ಲಿ ಕೆಳ ಸೇತುವೆ ಹಾಗೂ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಸಂಬಂಧ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅದರಂತೆ ನಗರದ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಪರ್ಡ್ ಭವನದ ಪಕ್ಕದಲ್ಲಿ ಹಾದು ಹೋಗಿರುವ ಬೋಗಾದಿ ರಸ್ತೆಯಿಂದ ಮುಡಾ ವೃತ್ತದವರೆಗೆ ಸಂಪರ್ಕ ಕಲ್ಪಿ$ಸುವಂತೆ ಅಂಡರ್‌ಪಾಸ್ ನಿರ್ಮಿಸುವ ಹಾಗೂ ಮೇಟಗಳ್ಳಿ ಸಮೀಪದ ಕೆಆರ್‌ಎಸ್ ರಸ್ತೆಯಲ್ಲಿರುವ ರಾಯಲ್ ಇನ್ ಹೋಟೆಲ್ ಜಂಕ್ಷನ್‌ನಿಂದ ಕೆಆರ್‌ಎಸ್ ಮಾರ್ಗದ ರೈಲ್ವೆ ಕ್ರಾಸಿಂಗ್‌ವರೆಗೂ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಕೇಂದ್ರದ ಬಜೆಟ್‌ನಲ್ಲಿ ಈ ಕಾಮಗಾರಿಗಳಿಗೆ ಹಣ ಮಂಜೂರಾಗಿದೆ. ರೈಲ್ವೆ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಮುಡಾ ಹಾಗೂ ವಾಣಿ ವಿಲಾಸ ವಾಟರ್ ವರ್ಕ್ಸ್ ಸಹಯೋಗದಲ್ಲಿ ಈ ಕೆಲಸ ಆಗಬೇಕಿದೆ.
ಈ ಎರಡು ಕಾಮಗಾರಿಯಲ್ಲಿ ಕೆಲವು ಬದಲಾವಣೆ ಆಗಬೇಕಿದ್ದು, ಬೋಗಾದಿ ರಸ್ತೆಯಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡುವ ಸಂಬಂಧ ಹೊಸ ಯೋಜನೆ ರೂಪಿಸಿ, ಜೂನ್ 10 ರೊಳಗೆ ಸಲ್ಲಿಸಲಾಗುವುದು. ಇನ್ನು ಕೆಆರ್‌ಎಸ್ ರಸ್ತೆಯ ಸಮೀಪದಲ್ಲಿ ಮೇಲ್ಸೇತುವೆ ನಿರ್ಮಿಸುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಅಲ್ಲದೆ ನಗರದ ಹೊರವರ್ತುಲ ರಸ್ತೆಯನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿರುವುದರಿಂದ ಇಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಇದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಅಲ್ಲದೆ ಮುಖ್ಯವಾಗಿ ಕೆಆರ್‌ಎಸ್ ರಸ್ತೆಯಲ್ಲಿ ಇಎಸ್‌ಐ ಆಸ್ಪತ್ರೆ, ಟ್ರಾಮಾ ಕೇರ್, ಪಾಸ್‌ಪೋರ್ಟ್ ಕಚೇರಿ ಮುಂತಾದ ಪ್ರಮುಖ ಕೇಂದ್ರಗಳೂ ಇರುವುದರಿಂದ, ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದ್ದು, ಇದನ್ನು ದೃಷ್ಟಿಯಲ್ಲಿ ಟ್ಟುಕೊಂಡು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನೈಋತ್ಯ ರೈಲ್ವೆ ಸಿವಿಲ್ ವಿಭಾಗದ ಉಪ ಮುಖ್ಯ ಎಂಜಿನಿಯರ್ ರವಿಚಂದ್ರನ್, ಲೋಕೋಪಯೋಗಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಾಣಿವಿಲಾಸ ವಾಟರ್ ವರ್ಕ್ಸ್ ಅಧಿಕಾರಿಗಳು ಭಾಗವಹಿಸಿದ್ದರು.