Advertisement

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

12:56 AM Oct 30, 2024 | Team Udayavani |

ಉಡುಪಿ: ಐದು ವರ್ಷಗಳಿಂದ ಬಹುತೇಕ ಸ್ಥಗಿತಗೊಂಡಂತಿದ್ದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಗೆ ಈಗ ಜೀವ ಬಂದಿದ್ದು, 2025ರ ಜನವರಿ 15 ರೊಳಗೆ ಮುಗಿಯುವ ಸಾಧ್ಯತೆ ಗೋಚರಿಸಿದೆ.

Advertisement

ಈ ಸಂಬಂಧ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ. ರೈಲ್ವೇ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಡುವಿನ ಗೊಂದಲವೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿತ್ತು.ಗರ್ಡರ್‌ ಬಂದು ತಿಂಗಳುಗಳು ಕಳೆದಿದ್ದರೂ ಕಾಮಗಾರಿ ಆರಂಭವಾಗಿರಲಿಲ್ಲ. ಈ ಪರಿಸರದಲ್ಲಿ ಅಪಘಾತಗಳೂ ಹೆಚ್ಚಾಗಿವೆ.

ಇವೆಲ್ಲದರಿಂದ ಆಕ್ರೋಶಗೊಂಡ ಸಾರ್ವಜನಿಕರೇ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳೂ ಎಚ್ಚೆತ್ತು ಗುತ್ತಿಗೆದಾರರಿಗೆ ಗಡುವು ವಿಧಿಸಿದ್ದಾರೆ.

ಸುಮಾರು 420 ಟನ್‌ ಸ್ಟೀಲ್‌ಗ‌ಳಿಂದ ಸಿದ್ಧವಾದ ಗರ್ಡರ್‌ ಬಳಸಿ ಸುಮಾರು 58 ಮೀಟರ್‌ ಉದ್ದದ ಸೇತುವೆ ನಿರ್ಮಿಸಲಾಗುತ್ತಿದೆ. ಇದು 12.50 ಮೀಟರ್‌ ಅಗಲ ಇರಲಿದ್ದು, ಸೇತುವೆಯ ಎರಡೂ ಬದಿಗಳಲ್ಲಿ 1.50 ಮೀಟರ್‌ ಅಗಲದ ಪಾದಚಾರಿ ಮಾರ್ಗ ಬರಲಿದೆ. ಎಲ್ಲ ಪರಿಕರಗಳು ಇಂದ್ರಾಳಿಗೆ ಬಂದು ಬಿದ್ದಿದ್ದು, ಜೋಡಣೆ ಕಾರ್ಯ ಮಾತ್ರ ಬಾಕಿಯಿದೆ.

ಕಾಮಗಾರಿಯನ್ನು ಮುಂದಿನ ಜ.15ರೊಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಬೇಕು ಎಂದು ನಗರ ಸಂಚಾರ ಠಾಣೆಯಲ್ಲಿ ಗುತ್ತಿಗೆ ದಾರರಿಂದ ಮುಚ್ಚಳಿಕೆಯನ್ನು ಬರೆ ಸಿಕೊಳ್ಳಲಾಗಿದೆ. ಗಡುವು ಮೀರಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ನೀಡಿದ್ದಾರೆ.

Advertisement

ವೆಲ್ಡಿಂಗ್‌ ವರ್ಕ್‌: ಸೇತುವೆ ಸಂಬಂಧ ವೆಲ್ಡಿಂಗ್‌ ವರ್ಕ್‌ ಪೂರೈಸಲೇ ಹೆಚ್ಚು ಕಾಲಾವಕಾಶ ಬೇಕು. ರೈಲ್ವೇಯಿಂದ ಮಾನ್ಯತೆ ಪಡೆದ ಸಂಸ್ಥೆಯೇ ಕಾಮಗಾರಿ ನಡೆಸುತ್ತಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಅನುಮತಿ ಪಡೆಯಬೇಕಿದೆ. ರೈಲ್ವೆ ಅಧಿಕಾರಿಗಳು ಖುದ್ದು ಪರಿಶೀಲನೆಯ ಬಳಿಕ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಬೇಕಿದೆ.

ಐದು ವರ್ಷ : ಶೂನ್ಯ ಸಂಪಾದನೆ
ಹಿಂದಿನ ಐದು ವರ್ಷ ಕಾಮಗಾರಿಯಲ್ಲಿ ಹೇಳಿಕೊಳ್ಳುವಂಥದ್ದೇನೂ ಆಗಲಿಲ್ಲ. ಕ್ಷೇತ್ರದ ಸಂಸದರೇ ಕೇಂದ್ರ ಸಚಿವರೂ ಆಗಿದ್ದರು. ಆದರೂ ಕಾಮಗಾರಿಯ ಒಂದು ಕಲ್ಲೂ ಸಹ ಅತ್ತಿತ್ತ ಸರಿದಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆಗಳೆರಡೂ ಒಂದೇ ಕೇಂದ್ರ ಸರಕಾರದಡಿ ಕಾರ್ಯ ನಿರ್ವಹಿಸಿದರೂ ಕಾಮಗಾರಿಗೆ ವೇಗ ಸಿಕ್ಕಿರಲಿಲ್ಲ. ಎರಡೂ ಇಲಾಖೆಗಳ ನಡುವಿನ ಗೊಂದಲ, ವಿಳಂಬದಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದರು. ಐದು ವರ್ಷಗಳ ಹಿಂದೆಯೇ ಈ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿತ್ತು. ಆದರೆ ಈ ಬಗ್ಗೆ ಸ್ಥಳೀಯ ಸಂಸದರೇ ಕೇಂದ್ರ ಸಚಿವರಾಗಿದ್ದಾಗಲೂ ಯಾವ ಪ್ರಯೋಜನವೂ ಆಗಿರಲಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next