ರಾಯಚೂರು: ಯೋಗ್ಯತೆ ಮತ್ತು ಅನುಭವದ ಆಧಾರದ ಮೇಲೆಯೇ ಸರ್ಕಾರಿ ಕೆಲಸಗಳಿಗೆ ನಿಯೋಜನೆ ಮಾಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ತಾಲೂಕು ಪಂಚಾಯಿತಿಗಳಿಗೆ ನಿಯೋಜನೆ ಮಾಡುವ ಮೂಲಕ ಸಿಬ್ಬಂದಿಗೆ ಹೆಚ್ಚುವರಿ ಹೊರೆ ನೀಡಲಾಗುತ್ತಿದೆ.
ಈ ರೀತಿ ಮಾಡಿಕೊಂಡಿದ್ದರೆ ಕೂಡಲೇ ಮೂಲ ಸ್ಥಾನಗಳಿಗೆ ಕಳುಹಿಸಬೇಕು ಎಂದು 2018ರಲ್ಲಿಯೇ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಎಲ್ಲ ಸಿಇಒಗಳಿಗೆ ಆದೇಶ ಮಾಡಿದ್ದರು. ಆದರೂ, ಜಿಲ್ಲೆಯ ಅಲ್ಲಲ್ಲಿ ಇಂಥ ಘಟನೆಗಳು ನಡೆದಿರುವುದು ಗಮನಕ್ಕೆ ಬಂದಿದೆ. ಈ ವಿಚಾರ ಸಿಇಒ ಗಮನಕ್ಕೂ ತಂದಿಲ್ಲ ಎನ್ನುವುದು ವಿಪರ್ಯಾಸ. ಜಿಲ್ಲೆಯಲ್ಲಿ ಮಸ್ಕಿ ಮತ್ತು ಸಿರವಾರ ನೂತನ ತಾಲೂಕುಗಳಾಗಿ ರಚನೆಯಾಗಿವೆ. ಅಲ್ಲಿಗೆ ಈವರೆಗೂ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಸುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿರುವ ಪಿಡಿಒ, ಕಾರ್ಯದರ್ಶಿ, ಸಹಾಯಕರನ್ನು ನಿಯೋಜನೆ ಮಾಡಲು ಖುದ್ದು ಸಿಇಒ ತಿಳಿಸಿದ್ದಾರೆ. ಆದರೆ, ಕೆಲ ಹಳೇ ತಾಲೂಕಿನ ತಾಪಂ ಕಚೇರಿಗಳಿಗೂ ಈ ರೀತಿ ಗ್ರಾಪಂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕೆಲಸಕ್ಕೆ ತೊಂದರೆ: ಗ್ರಾಮ ಪಂಚಾಯಿತಿಗಳಿಗೆ ನಿಯೋಜನೆಗೊಂಡ ಸಿಬ್ಬಂದಿಗೆ ನೀಡಿದ ತರಬೇತಿಯೇ ಬೇರೆ, ತಾಪಂ ಸಿಬ್ಬಂದಿ ಕಾರ್ಯ ವೈಖರಿಯೇ ಬೇರೆಯಾಗಿರುತ್ತದೆ. ಹೀಗಾಗಿ ಅಲ್ಲಿಗೆ ತಾತ್ಕಾಲಿಕ ಸೇವೆಯಡಿ ಬಂದ ಸಿಬ್ಬಂದಿಗೆ ಕೆಲಸ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ಏನಾದರೂ ಯಡವಟ್ಟುಗಳಾದರೆ ಎಲ್ಲಿ ಕೆಲಸಕ್ಕೆ ಕುತ್ತು ಉಂಟಾಗುವುದೋ ಎಂಬ ಆತಂಕದಲ್ಲೇ ಕೆಲಸ ಮಾಡುವಂತಾಗಿದೆ. ಆದರೆ, ಸಿಬ್ಬಂದಿ ಕೊರತೆ ಸಮಸ್ಯೆ ಎದುರಿಸುತ್ತಿರುವುದರಿಂದ ಅನಿವಾರ್ಯವಾಗಿ ಕೆಲಸ ಮಾಡಬೇಕಿದೆ.
ಹಿಂದೆಯೇ ಸುತ್ತೋಲೆ ಬಂದಿತ್ತು: ಇಂಥ ಪ್ರಕರಣಗಳು 2018ರಲ್ಲಿಯೇ ನಡೆದಿದ್ದವು. ಆಗ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಜಿಪಂ ಸಿಇಒಗಳಿಗೆ ಆದೇಶ ಹೊರಡಿಸಿ ಕೂಡಲೇ ಸಿಬ್ಬಂದಿಯನ್ನು ಮೂಲ ಸ್ಥಾನಗಳಿಗೆ ಕಳುಹಿಸುವಂತೆ ಸೂಚಿಸಿದ್ದರು. ಅದಾದ ಬಳಿಕ 2019ರ ಫೆಬ್ರವರಿಯಲ್ಲಿ ರಾಮನಗರ ಜಿಲ್ಲೆ ಸಿಇಒಗೂ ಸೂಚನೆ ನೀಡಲಾಗಿತ್ತು. ಈಗ ಜಿಲ್ಲೆಯಲ್ಲೂ ಅಂಥ ಪ್ರಕರಣಗಳು ಕಂಡು ಬಂದಿವೆ. ಸರ್ಕಾರಕ್ಕೆ ಕೆಲಸದ ಒತ್ತಡ ಇದ್ದಲ್ಲಿ ಹೊಸ ನೇಮಕಾತಿ ನಡೆಸಲಿ. ಅದು ಬಿಟ್ಟು ಈ ರೀತಿ ಗೊತ್ತಿರದ ಕೆಲಸಗಳಿಗೆ ಸಿಬ್ಬಂದಿ ನಿಯೋಜಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.
ಗ್ರಾಪಂಗೂ ಸಿಬ್ಬಂದಿ ಕೊರತೆ: ಗ್ರಾಮ ಪಂಚಾಯಿತಿಗಳಿಗೆ ಸಿಬ್ಬಂದಿ ಕೊರತೆ ಇದೆ. ಜಿಲ್ಲೆಯಲ್ಲಿ ಸಾಕಷ್ಟು ಕಡೆ ಎರಡು ಪಂಚಾಯಿತಿ ಹೊಣೆಯನ್ನು ಒಬ್ಬ ಪಿಡಿಒ ನಿರ್ವಹಿಸುವ ಸ್ಥಿತಿ ಇದೆ. ಇದರಿಂದ ಜನರ ಕೆಲಸಗಳಾದೆ ಪರದಾಡುವ ಸ್ಥಿತಿ ಇದೆ. ಅಂಥದ್ದರಲ್ಲಿ ಇರುವ ಸಿಬ್ಬಂದಿಯನ್ನು ಅದು ಯೋಗ್ಯವಲ್ಲದ ಹುದ್ದೆಗಳಿಗೆ ನಿಯೋಜಿಸಿರುವುದು ವಿಪರ್ಯಾಸ.
ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಮಸ್ಕಿ, ಸಿರವಾರ ತಾಲೂಕು ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸುತ್ತಲಿನ ಗ್ರಾಮ ಪಂಚಾಯಿತಿಗಳಿಂದ ಕೆಲ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ. ಆದರೆ, ಹಳೇ ತಾಲೂಕುಗಳಲ್ಲೂ ಈ ರೀತಿ ನಡೆದಿದೆ ಎನ್ನುವುದು ತಿಳಿದಿಲ್ಲ. ಈ ಕುರಿತು ಪರಿಶೀಲಿಸಿ ಶೀಘ್ರದಲ್ಲೇ ಮೂಲ ಸ್ಥಳಗಳಿಗೆ ಕಳುಹಿಸಲಾಗುವುದು.
ಲಕ್ಷ್ಮೀಕಾಂತ ರೆಡ್ಡಿ,
ಜಿಪಂ ಸಿಇಒ, ರಾಯಚೂರು