ರಾಯಚೂರು: ಕೊರೊನಾ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ, ರಿಮ್ಸ್‌ನಲ್ಲಿ ರೋಗ ತಪಾಸಣೆಗೆ ವಿಶೇಷ ವಿಭಾಗ ತೆರೆದಿದೆ.
ರಿಮ್ಸ್‌ನ ಬ್ಲಿಡ್ ಬ್ಯಾಂಕ್ ಬಳಿ ಎಂಟು ಬೆಡ್‌ಗಳ ಕೇಂದ್ರ ತೆರೆಯಲಾಗಿದೆ. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದು, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ರೋಗದ ಲಕ್ಷಣಗಳುಳ್ಳ ಜನ ಆಸ್ಪತ್ರೆಗೆ ಬಂದಲ್ಲಿ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೇ, ಜಿಲ್ಲೆಯ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ ಎರಡು ಬೆಡ್ ಗಳನ್ನು ಅಳವಡಿಸಲಾಗಿದೆ. ಉಸಿರಾಟ ಸಮಸ್ಯೆ, ಜ್ವರ, ಆಯಾಸ ಸೇರಿದಂತೆ ಇನ್ನಿತರ ಸಮಸ್ಯೆಗಳುಳ್ಳ ರೋಗಿಗಳು ಬಂದರೆ ತಕ್ಷಣಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಅಂಥ ಯಾವುದೇ ಲಕ್ಷಣಗಳುಳ್ಳ ರೋಗಿಗಳು ಬಂದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ರಿಮ್ಸ್ ನಿರ್ದೇಶಕ ಡಾ| ಬಸವರಾಜ ಪೀರಾಪುರ, ರಾಜ್ಯದೆಲ್ಲೆಡೆ ಕೊರೊನಾ ಕಾಯಿಲೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ರಿಮ್ಸ್‌ನಲ್ಲೂ ವಿಶೇಷ ತಪಾಸಣಾ ಕೇಂದ್ರ ಆರಂಭಿಸಲಾಗಿದೆ. ರೋಗದ ಲಕ್ಷಣ ಇರುವ ರೋಗಿ ಕಂಡುಬಂದಲ್ಲಿ ರಕ್ತದ ಮಾದರಿ
ಪಡೆದು ಮಣಿಪಾಲ್‌ನ ಕೆಎಂಸಿ, ಬೆಂಗಳೂರಿನ ನಿಮ್ಹಾನ್ಸ್ ಇಲ್ಲವೇ ಪುಣೆಯ ಎನ್‌ಐವಿ ಆಸ್ಪತ್ರೆಗಳಿಗೆ ಪರೀಕ್ಷೆಗೆಂದು ಕಳುಹಿಸಲಾಗುವುದು. ಒಂದು ವಾರದೊಳಗೆ ವರದಿ ಬರಲಿದೆ ಎಂದು ತಿಳಿಸಿದ್ದಾರೆ.