Advertisement

ಮಾಚಿದೇವರು ಮನುಕುಲದ ಆಸ್ತಿ

01:43 PM Feb 02, 2020 | Naveen |

ರಾಯಚೂರು: ಶ್ರೀ ಮಡಿವಾಳ ಮಾಚಿದೇವರು ಮಾನವ ಕುಲದ ಆಸ್ತಿಯಾಗಿದ್ದು, ಅವರ ವಚನ ಮತ್ತು ತತ್ವಾದರ್ಶಗಳ ಹಾದಿಯಲ್ಲಿ ಇಂದಿನ ಸಮಾಜ ಸಾಗಬೇಕಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಸುಧಾರಕರಾಗಿದ್ದ ಮಾಚಿದೇವರು ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಮಹಾ ಶರಣರಲ್ಲೊಬ್ಬರು. ಸಮಸ್ಯೆಗಳಿಗೆ ಹೆದರದೆ ಮುನ್ನುಗ್ಗಿ ಜನರ ಮನಸ್ಸಿನಲ್ಲಿ ಅರಿವು ಮೂಡಿಸಿದ್ದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಾಮಾಜಿಕ ಸಮಾನತೆಯ ತತ್ವ ಸಂದೇಶಗಳನ್ನು ಸಾರಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಶರಣರ ಮಾರ್ಗದರ್ಶನದಲ್ಲಿ ನಡೆಯಬೇಕಿದ್ದು, ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದಾಗ ಮಾತ್ರ ಒಂದು ಸಮಾಜ ಬಲಿಷ್ಠವಾಗಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಗೆ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದರು.

ನಗರ ಶಾಸಕ ಡಾ| ಎಸ್‌.ಶಿವರಾಜ ಪಾಟೀಲ ಮಾತನಾಡಿ, ಹಿಂದುಳಿದ ಸಮಾಜಗಳಲ್ಲಿ ಮಡಿವಾಳ ಸಮಾಜ ಕೂಡ ಒಂದು. ಈ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಮಾಜದ ಯುವಕರು ಐಎಎಸ್‌, ಕೆಎಎಸ್‌ ಅಧಿಕಾರಿಗಳಾಗಿ ಸಮಾಜದ ಪ್ರಗತಿಗೆ ಶ್ರಮಿಸಬೇಕು. ಬಡವರ ಮಕ್ಕಳು ಚನ್ನಾಗಿ ಓದುತ್ತಿದ್ದರೆ ಸಮಾಜದಿಂದ ನೆರವು ನೀಡಬೇಕು. ಅವರಿಗೆ ಬೇಕಾದ ಸಹಕಾರ ನೀಡಲು ಸಿದ್ಧ ಎಂದರು.

Advertisement

ಮಡಿವಾಳ ಸಮಾಜ ಜಿಲ್ಲಾಧ್ಯಕ್ಷ ಜಿ. ಸುರೇಶ ಮಾತನಾಡಿ, ಮಡಿವಾಳ ಸಮಾಜದವರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ 30 ವರ್ಷಗಳಿಂದ ಹೋರಾಡುತ್ತಿದ್ದೇವೆ. ಇದಕ್ಕೆ ಅಧಿಕಾರಿಗಳು ಗಮನ ಹರಿಸಬೇಕಿದ್ದು, ನಮ್ಮ ಜನಾಂಗಕ್ಕೆ ರುದ್ರಭೂಮಿ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ಝಂಜಿರಮಠದ ಶ್ರೀ ಬಸವ ಕುಟೀರ ಪಾವನ ಕ್ಷೇತ್ರದ ಶರಣರಾದ ಶ್ರೀ ಬಸವರಾಜೇಂದ್ರ ಶರಣರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾ ಧಿಸಿದ ಮಡಿವಾಳ ಸಮಾಜದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಡಿಸಿ ದುರುಗೇಶ, ನಗರಸಭೆ ಸದಸ್ಯರಾದ ವಿ.ನಾಗರಾಜ, ಆಂಜನೇಯ, ರವೀಂದ್ರ ಜಲ್ದಾರ್‌, ಎಂ.ಕೆ.ನಾಗರಾಜ, ಸಮಾಜದ ಮುಖಂಡರಾದ ಜಂಬಣ್ಣ, ಪಿ.ಧರ್ಮೇಂದ್ರ, ಟಿ.ಮಲ್ಲೇಶ, ಶಿವಶಂಕರ, ಮಹಿಳಾ ಘಟಕದ ಪ್ರಮುಖರಾದ ಮಂಜುಳಾ, ಜಮುನಾ, ಉಮಾ ಸೇರಿ ಅನೇಕರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ವಿ.ನಾಯಕ ಸ್ವಾಗತಿಸಿದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಜಯಂತಿ ಅಂಗವಾಗಿ ಮಡಿವಾಳ ಮಾಚಿದೇವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರದ ಶ್ರೀ ಮಡಿವಾಳ ಮಾಚಿದೇವ ವೃತ್ತದಲ್ಲಿ ಪುತ್ಥಳಿಗೆ ಜನಪ್ರತಿನಿಧಿ ಗಳು, ಗಣ್ಯರು ಮಾಚಿದೇವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ಮೆರವಣಿಗೆ ಶೆಟ್ಟಿಭಾವಿ ವೃತ್ತ, ಸರಾಫ ಬಜಾರ್‌, ತೀನ್‌ ಕಂದಿಲ್‌, ಸೂಪರ್‌ ಮಾರ್ಕೆಟ್‌, ಏಕಮೀನಾರ ರಸ್ತೆ, ತಹಶೀಲ್ದಾರ್‌ ಕಚೇರಿ, ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ರಂಗಮಂದಿರ ತಲುಪಿತು. ಮಹಿಳೆಯರು ಕುಂಬ ಕಳಸದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಲಾವಿದರಿಂದ ಆಕರ್ಷಕ ನೃತ್ಯ ಪ್ರದರ್ಶನ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next