Advertisement
ಅಧಿಕಾರಕ್ಕೆ ಬರುತ್ತಿದ್ದಂತೆ ಹೈದರಾಬಾದ್ ಕರ್ನಾಟಕದ ಹೆಸರು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಸಿಎಂ, ಈ ಭಾಗಕ್ಕೆ ಬಂದಾಗಲೊಮ್ಮೆ ಅಭಿವೃದ್ಧಿಯ ಮಾತನ್ನಾಡಿದ್ದಾರೆ. ಅವರ ಮಾತುಗಳು ಈ ಸಾಲಿನ ಬಜೆಟ್ ಎಷ್ಟರ ಮಟ್ಟಿಗೆ ಸಾಕ್ಷೀಕರಿಸುವುದೋ ಕಾದು ನೋಡಬೇಕು. ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಕಮಲಕ್ಕೆ ಅಧಿಕಾರ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶಾಸಕರಲ್ಲಿ ಜಿಲ್ಲೆಯ ಮಸ್ಕಿ ಕ್ಷೇತ್ರ ಪ್ರತಾಪಗೌಡ ಕೂಡ ಇದ್ದಾರೆ. ಆ ಒಂದು ಕೃತಜ್ಞ ಭಾವದಲ್ಲಿ ಜಿಲ್ಲೆಗೇನಾದರೂ ಹೊಸ ಯೋಜನೆ ಬರಬಹುದು. ಅದರ ಜತೆಗೆ ನೀರಾವರಿ, ಕೃಷಿ, ಶಿಕ್ಷಣ, ಸಾರಿಗೆ ಸೌಲಭ್ಯದಂತ ಸಾಕಷ್ಟು ಸಂಗತಿಗಳು ಬೇಡಿಕೆ ಪಟ್ಟಿಯಲ್ಲಿವೆ.
Related Articles
Advertisement
ಏರ್‌ಪೋರ್ಟ್‌ಗೆ ರೆಕ್ಕೆ ಪುಕ್ಕ: ಇಷ್ಟು ದಿನ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದ್ದ ವಿಮಾನ ನಿಲ್ದಾಣ ಬೇಡಿಕೆ ಈಗ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಯರಮರಸ್ ಬಳಿ ಅದಕ್ಕಾಗಿ 400 ಎಕರೆ ಸ್ಥಳ ನಿಗದಿ ಮಾಡಲಾಗಿದೆ. ಕಲಬುರಗಿ, ಬೀದರ್‌ನಲ್ಲಿ ವಿಮಾನ ನಿಲ್ದಾಣ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕೂಗೆದ್ದಿದೆ. ತಜ್ಞರ ತಂಡ ಬಂದು ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣ ಜಿಲ್ಲೆಯ ಜನಪ್ರತಿನಿ ಧಿಗಳು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಆರಂಭಿಕ ಹಂತದಲ್ಲಿ 250 ಕೋಟಿ ರೂ. ನೀಡಬೇಕು. ತ್ವರತಿಗತಿಯಲ್ಲಿ ನಾಗರಿಕ ವಿಮಾನಯಾನ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಐಐಐಟಿಗೆ ಬೇಕು ಹಣ: ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಐಐಐಟಿ ಸಂಸ್ಥೆಗೆ 125 ಕೋಟಿ ರೂ. ಬೇಕಾಗಬಹುದು ಎಂದು ಶಿಕ್ಷಣ ಸಚಿವರೇ ತಿಳಿಸಿದ್ದಾರೆ. ಅದು ಕೇಂದ್ರ ಸರ್ಕಾರ ಸಹಭಾಗಿತ್ವದಡಿ ಸ್ಥಾಪಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ಕೂಡಹಣ ನೀಡಬೇಕು. ಅದಕ್ಕೂ ಮುನ್ನ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣ ಬಿಡುಗಡೆ ಮಾಡಬೇಕಿದೆ. ಈಗಾಗಲೇ ಸ್ಥಳ ನಿಗದಿ ಮಾಡಿದ್ದು ಕೆಲಸ ಕಾರ್ಯಗಳು ಶುರುವಾಗಿವೆ. ಕೆಕೆಆರ್‌ಡಿಬಿಯಿಂದ 2.50 ಕೋಟಿ ಪಡೆದು ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಥೆ ಆರಂಭಿಸಲಾಗುತ್ತಿದೆ. ಬಗೆಹರಿಯದ ಒಪೆಕ್ ಸಮಸ್ಯೆ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಒಪೆಕ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸಮಸ್ಯೆ ಇಂದಿಗೂ ಇತ್ಯರ್ಥಗೊಂಡಿಲ್ಲ. ಒಂದೆಡೆ ನಿರ್ವಹಣೆ ಸಮಸ್ಯೆ ಕಾಡುತ್ತಿದ್ದರೆ ಮತ್ತೂಂದೆಡೆ ಆಡಳಿತಾತ್ಮಕ ಸಮಸ್ಯೆಗಳು ಇವೆ. ಒಪೆಕ್ ಸ್ವಾಯತ್ತ ಸಂಸ್ಥೆಯನ್ನಾಗಿಸಿ ವಿಶೇಷ ಅನುದಾನ ಘೋಷಿಸಿದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮತ್ತೆ ಉತ್ತಮ ಸೇವೆ ನೀಡಬಹುದು. ಮಹಾನಗರ ಪಾಲಿಕೆ: ರಾಯಚೂರು ನಗರಸಭೆ ವ್ಯಾಪ್ತಿ ವಿಸ್ತರಣೆಯಾಗುತ್ತಿದ್ದು, ಈಗ ಮಹಾನಗರ ಪಾಲಿಕೆ ರಚನೆ ಬೇಡಿಕೆ ಹೆಚ್ಚುತ್ತಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಕೂಡ ಸಿಎಂಗೆ ಬೇಡಿಕೆ ಸಲ್ಲಿಸಿದೆ. ಶಕ್ತಿನಗರ ಒಳಗೊಂಡಂತೆ ಮಹಾನಗರ ಪಾಲಿಕೆ ರಚಿಸಲು ಸರ್ಕಾರ ಮುಂದಾಗಬೇಕಿದೆ. ಅದರ ಜತೆಗೆ ಪ್ರತ್ಯೇಕ ವಿವಿ ಸ್ಥಾಪನೆಗೆ ವಿಶೇಷ ಅನುದಾನ, ಹೊಸ ತಾಲೂಕುಗಳಿಗೆ ಅನುದಾನದ ಕೊರತೆ ಇದ್ದರೆ, ಮತ್ತೆರಡು ತಾಲೂಕು ರಚನೆಗೆ ಬೇಡಿಕೆ ಇದೆ. ಹೊಸ ತಾಲೂಕುಗಳಿಗೆ ಸೂಕ್ತ ಸೌಲಭ್ಯ, ನಗರಕ್ಕೆ ರಿಂಗ್ ರಸ್ತೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತು ನೀಡಬೇಕಿದೆ. ಸಿದ್ಧಯ್ಯಸ್ವಾಮಿ ಕುಕನೂರು