ರಾಯಚೂರು: ಇಷ್ಟು ದಿನ ಕೇವಲ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿದ್ದ ಕೋವಿಡ್ -19 ಚಿಕಿತ್ಸೆ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದೆ. ಇದಕ್ಕಾಗಿ ನಗರದ ಐದು ಆಸ್ಪತ್ರೆಗಳನ್ನು ಆಯ್ಕೆ ಮಾಡಿದ್ದು, ಸಿದ್ಧತೆ ಕಾರ್ಯಗಳು ಶುರುವಾಗಿವೆ.
ಇಷ್ಟು ದಿನ ನಗರದ ಒಪೆಕ್ ಆಸ್ಪತ್ರೆಯಲ್ಲಿ ಸ್ಥಾಪಿಸಿದ ಕೋವಿಡ್-19 ವಿಭಾಗದಲ್ಲಿಯೇ ಕೋವಿಡ್ ವೈರಸ್ ಮಾದರಿ ಸಂಗ್ರಹಿಸಲಾಗುತ್ತಿತ್ತು. ಹಾಗೂ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ, ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾದರಿ ಸಂಗ್ರಹಿಸಲಾಗುತ್ತಿತ್ತು. ವರದಿ ಫಲಿತಾಂಶ ಪಾಸಿಟಿವ್ ಎಂದು ಬಂದಲ್ಲಿ ಅವರನ್ನು ಒಪೆಕ್‌ನ ಐಸೊಲೇಶನ್ ವಾರ್ಡ್‌ಗೆ ದಾಖಲಿಸಲಾಗುತ್ತಿತ್ತು. ಈಗ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೂ ಅವಕಾಶ ನೀಡಲಾಗಿದೆ. ನಗರದ ಒಪೆಕ್, ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹೊಸಮನಿ ಆಸ್ಪತ್ರೆ, ಶಾಂತಿ ಆಸ್ಪತ್ರೆ, ಶ್ರೀ ರೇಣುಕಾ ಆಸ್ಪತ್ರೆ, ಭಂಡಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಚಿಕಿತ್ಸೆ ಸಿಗಲಿದೆ. ಆದರೆ, ಇನ್ನೂ ಯಾವುದೇ ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಸಿದ್ಧತೆ ಕೆಲಸ ಆರಂಭಿಸಿಲ್ಲ.
ಯಾಕೆ ಈ ಆಸ್ಪತ್ರೆ ಆಯ್ಕೆ: ಸರ್ಕಾರ ಕೋವಿಡ್-19 ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲಿ ಕೆಲವೊಂದು ಆಸ್ಪತ್ರೆಗಳನ್ನು ಆಯ್ಕೆ ಮಾಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸ್ವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ನೋಂದಣಿ ಮಾಡಿಕೊಂಡ ಆಸ್ಪತ್ರೆಗಳಿಗೆ ಮಾತ್ರ ಈ ಅವಕಾಶ ಸಿಗಲಿದೆ. ಈ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡಿದರೆ ಬಳಿಕ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಲಿದೆ. ಆದರೆ, ಈ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆ ನೀಡಲು ಯೋಗ್ಯವೋ ಅಲ್ಲವೋ ಎಂದು ಆರೋಗ್ಯ ಇಲಾಖೆ ಶಿಫಾರಸು ಮಾಡಿದರೆ ಮಾತ್ರ ಚಿಕಿತ್ಸೆ ನೀಡಲು ಅವಕಾಶವಿದೆ.
ಸೌಲಭ್ಯಗಳಿದ್ದರೆ ಮಾತ್ರ ಅನುಮತಿ: ಕೋವಿಡ್-19 ಚಿಕಿತ್ಸೆ ನೀಡಲು ಸರ್ಕಾರ ಆಸ್ಪತ್ರೆಗಳನ್ನು ಆಯ್ಕೆ ಮಾಡಿದ್ದರೂ ಅಲ್ಲಿ ಅಗತ್ಯ ಸೌಲಭ್ಯಗಳಿದ್ದರೆ ಮಾತ್ರ ಅನುಮತಿ ನೀಡಲು ಜಿಲ್ಲಾಡಳಿತ ಚಿಂತಿಸಿದೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಪದ್ಧತಿಯೇ ಬೇರೆ ಇದೆ. ಅವರಿಗೆ ಪ್ರತ್ಯೇಕ ವಾರ್ಡ್ ಬೇಕು. ಪರೀಕ್ಷೆಗೆ ಪ್ರತ್ಯೇಕ ವಿಭಾಗ ಬೇಕು. ಅಲ್ಲಿನ ಸಿಬ್ಬಂದಿಗೆ ಅಗತ್ಯ ತರಬೇತಿ ಬೇಕು. ಅಲ್ಲದೇ, ಗರ್ಭಿಣಿಯರಿಗೂ ಪ್ರತ್ಯೇಕ ವಾರ್ಡ್ ನೀಡಬೇಕು. ಅಲ್ಲದೇ, ಜೈವಿಕ ತ್ಯಾಜ್ಯ ವಿಲೇವಾರಿಗೂ ಸೂಕ್ತ ವ್ಯವಸ್ಥೆ ಇರಬೇಕು. ಇಷ್ಟೆಲ್ಲ ಸೌಲಭ್ಯಗಳಿರುವುದು ಖಚಿತಪಡಿಸಿಕೊಂಡ ಬಳಿಕವೇ ಅಂಥ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅವಕಾಶ ನೀಡುವುದಾಗಿ ತಿಳಿಸುತ್ತಾರೆ ಜಿಲ್ಲಾಧಿಕಾರಿ.
ಜಿಲ್ಲೆಯಲ್ಲಿ ಕೋವಿಡ್ ವೈರಸ್ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಈಗ ನಮ್ಮ ಬಳಿ ಅಷ್ಟೊಂದು ರೋಗಿಗಳು ಇಲ್ಲ. ಹೀಗಾಗಿ ಅಗತ್ಯವಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುವುದು. ಗುಣಮುಖರಾದ 272 ಜನರನ್ನು ಬಿಡುಗಡೆ ಮಾಡಲಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಸಿದ್ಧವಾಗಿವೆ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸಲಾಗಿದೆ. ಎಲ್ಲ ಸೌಲಭ್ಯ ಸುಸಜ್ಜಿತವಾಗಿದ್ದರೆ ಮಾತ್ರ ಚಿಕಿತ್ಸೆಗೆ ಅವಕಾಶ ನೀಡಲಾಗುವುದು.
ಆರ್.ವೆಂಕಟೇಶ ಕುಮಾರ,
ಜಿಲ್ಲಾಧಿಕಾರಿ