ರಾಯಚೂರು: ರಸ್ತೆಗೆ ಹಾಕಿದ ವರ್ಷದೊಳಗೆ ಡಾಂಬಾರ್ ಕಿತ್ತು ಹೋಗುವುದು, ಕಟ್ಟಿದ ವರ್ಷದೊಳಗೆ ಕಟ್ಟಡದ ಸಿಮೆಂಟ್ ಕಳಚುವ ಸುದ್ದಿ ಆಗಾಗ ನೋಡಿರುತ್ತೇವೆ. ಆದರೆ, ಇಲ್ಲೊಂದು ಕಡೆ ಸಿಸಿ ರಸ್ತೆ ನಿರ್ಮಿಸಿದ ಮರುದಿನವೇ ಕಿತ್ತುಕೊಂಡು ಹೋಗುವಷ್ಟು ಕಳಪೆ ಕಾಮಗಾರಿ ಮಾಡಲಾಗಿದೆ.
ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ಈಚೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯಡಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಅದು ನಿರ್ಮಿಸಿದ ಮರುದಿನವೇ ರಸ್ತೆಯೆಲ್ಲ ಕಿತ್ತು ಹೋಗಿದ್ದು, ತೀರ ಕಳಪೆ ಮಟ್ಟದ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ವಹಿಸಲಾಗಿದೆ ಎಂಬುದು ಸ್ಥಳೀಯರ ಆರೋಪ.
ಗುಣಮಟ್ಟದ ಸಾಮಗ್ರಿ ಬಳಸಿಲ್ಲ. ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಅಕ್ಕ ಪಕ್ಕ ಸಮರ್ಪಕವಾಗಿ ಅಂತ್ಯಗೊಳಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಾಮಗಾರಿ ನಿರ್ವಹಿಸಿದ ಮೇಲೆ ಸೂಚನಾ ಫಲಕ ಹಾಕಿ ಸಂಚಾರ ನಿಷೇಧಿಸಿಲ್ಲ. ರಸ್ತೆ ಸಮತಟ್ಟಾಗಿ ನಿರ್ಮಿಸದ ಕಾರಣ ಮಳೆ ಬಂದು ರಸ್ತೆಯಲ್ಲೆಲ್ಲ ನೀರು ನಿಂತು ಕಾಂಕ್ರಿಟ್ ಕೊಚ್ಚಿ ಹೋಗಿದೆ. ಹಸಿ ರಸ್ತೆ ಮೇಲೆ ವಾಹನ ಓಡಿಸಿದ್ದರಿಂದ ರಸ್ತೆ ಹಾಳಾಗಿದೆ. ಇನ್ನೂ ಕೆಲವೆಡೆ ದನ ಕರುಗಳೂ ಓಡಾಡಿವೆ.
ಶಾಸಕರಿಂದಲೇ ಚಾಲನೆ: ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಅವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಸಿಸಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಮಂಜೂರು ಮಾಡಿದ್ದರು. ಅಲ್ಲದೇ, ಕಳೆದ ಅ.8ರಂದು ತಾವೇ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಅದಾಗಿ ಕೆಲ ದಿನಗಳಿಗೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದಾರೆ. ಆದರೆ, ಕಾಟಾಚಾರಕ್ಕೆ ಎನ್ನುವಂತೆ ಕೆಲಸ ಮಾಡಿದ್ದು, ಎಲ್ಲಿಯೂ ಅಚ್ಚುಕಟ್ಟುತನ ತೋರಿಲ್ಲ. ಇದರಿಂದ ರಸ್ತೆ ಆಯಸ್ಸು ಒಂದೇ ದಿನದಲ್ಲಿ ಸವೆದಿದೆ.
ಮರು ನಿರ್ಮಾಣಕ್ಕೆ ಆಗ್ರಹ: ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿ ಈ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆ. 10 ಲಕ್ಷ ರೂ. ವೆಚ್ಚದ ಕಾಮಗಾರಿಯಾದರೂ ಗಂಭೀರತೆ ಪ್ರದರ್ಶಿಸಿಲ್ಲ. ಮಂಜೂರಾದ ಹಣದಲ್ಲಿ ಅರ್ಧ ಕೂಡ ಖರ್ಚು ಮಾಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ರಸ್ತೆಯನ್ನು ಗುಣಮಟ್ಟದಿಂದ ಮತ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.