ಸಿಂಧನೂರು: ರಾಯಚೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಾಯಿಸಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಗೂ ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಎಪಿಎಂಸಿ ಗಣೇಶ ದೇವಸ್ಥಾನದದಿಂದ ಪ್ರತಿಭಟನೆ ಆರಂಭಿಸಿದ ನೂರಾರು ವಿದ್ಯಾರ್ಥಿಗಳು, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತ್ಯೇಕ ವಿವಿ ಸ್ಥಾಪನೆಗೆ ಆಗ್ರಹಿಸಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶ 2011ರವರೆಗೆ 6 ಜಿಲ್ಲೆಗಳ ನಡುವೆ ಕೇವಲ ಗುಲ್ಬರ್ಗಾ ವಿಶ್ವವಿದ್ಯಾಲಯ ಮಾತ್ರ ಉನ್ನತ ಶಿಕ್ಷಣ ನೀಡುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿದೆ. ಬೆಳೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲೇಜುಗಳ ಸಂಲಗ್ನತೆಯ ಹಿನ್ನೆಲೆಯಲ್ಲಿ 2011ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ವಿಭಜಿಸಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಎಂದು ಬಳ್ಳಾರಿಯಲ್ಲಿ ಸ್ಥಾಪಿಸಲಾಯಿತು. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬೀದರ್, ರಾಯಚೂರು, ಗುಲ್ಬರ್ಗಾ, ಯಾದಗಿರಿ ಜಿಲ್ಲೆಗಳು ಒಳಗೊಂಡು ಸುಮಾರು 550 ಕಾಲೇಜುಗಳು ಇವೆ. ಆಡಳಿತಾತ್ಮಕ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗುಲ್ಬರ್ಗ ವಿವಿಯನ್ನು ಗುಲ್ಬರ್ಗ ಮತ್ತು ಬೀದರ ಜಿಲ್ಲೆಗಳ ವ್ಯಾಪ್ತಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸುಮಾರು 150 ಕಾಲೇಜು ಇವೆ. ಈ ಎರಡು ಜಿಲ್ಲೆಗಳ ವ್ಯಾಪ್ತಿ ಸೇರಿಸಿ ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವಂತೆ ಹಲವು ಬಾರಿ ಹೋರಾಟ ಮಾಡುತ್ತ ಬರಲಾಗಿದೆ. 2017-18ನೇ ಸಾಲಿನಲ್ಲಿ ಆಗಿನ ಮುಖ್ಯಮಂತ್ರಿ ಬಜೆಟ್‌ನಲ್ಲಿ ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಘೋಷಿಸಿದ್ದರು. ಈಗಾಗಲೇ ರಾಯಚೂರು ತಾಲೂಕಿನ ಯರಗೇರಾ ಹತ್ತಿರ 250 ಎಕರೆ ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ಸ್ನಾತಕೋತ್ತರ ಪದವಿ ಕೇಂದ್ರವಿದೆ. ಅದೇ ಕೇಂದ್ರವನ್ನು ರಾಯಚೂರು ವಿಶ್ವವಿದ್ಯಾಲಯವನ್ನಾಗಿ ಮಾಡಲು ನಿರ್ಧರಿಸಿದ ಸರ್ಕಾರ ವಿಶ್ವವಿದ್ಯಾಲಯ ಸ್ಥಾಪನೆ ಪ್ರಕ್ರಿಯೆ ಪ್ರಾರಂಭಿಸಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2017ರಲ್ಲಿ ರಾಯಚೂರು ವಿಶ್ವವಿದ್ಯಾಲಯವನ್ನು ಸೇರಿಸಲಾಗಿದೆ. ಈ ಕಾಯ್ದೆಯನ್ನು ರಾಜ್ಯ ವಿಧಾನಮಂಡಲದ ಎರಡು ಸದನಗಳಲ್ಲಿ ಒಪ್ಪಿಗೆ ಪಡೆದು 2018ರ ಫೆಬ್ರವರಿಯಲ್ಲಿ ರಾಜ್ಯಪಾಲರ ಅನುಮೋದನೆಗಾಗಿ ಕಳಿಸಲಾಗಿದೆ. ಆದರೆ ರಾಜ್ಯಪಾಲರು ಈ ಅನುಮೋದನೆ ವಾಪಸ್ ಕಳಿಸಿದ್ದಾರೆ. ಈಗ ಸರ್ಕಾರ ಈ ಅಧಿನಿಯಮಕ್ಕೆ ರಾಷ್ಟ್ರಪತಿಗಳ ಅನುಮೋದನೆ ಪಡೆಯಲು ಮುಂದಾಗಿದ್ದು, ಇದರಿಂದ ರಾಯಚೂರು ವಿವಿ ಸ್ಥಾಪನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕೂಡಲೇ ಸರಕಾರ ಎಚ್ಚೆತ್ತುಕೊಂಡು ರಾಯಚೂರು ಪ್ರತ್ಯೇಕ ವಿವಿ ಆರಂಭಿಸಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಎಚ್ಚರಿಸಿದರು.
ವೈ. ನರೇಂದ್ರನಾಥ, ಆರ್.ಸಿ. ಪಾಟೀಲ, ತಿಮ್ಮಣ್ಣ ರಾಮತ್ನಾಳ ಸತ್ಯನಾರಾಯಣ, ಹೊನ್ನೂರ ಹುಸೇನ, ತಿರುಪತಿ ವಡ್ಕಿ, ಅನಿಲ, ಮಂಜುನಾಥ, ವೆಂಕಟರಾವ್, ಪರಶುರಾಮ ಕೊಡ್ಲಿ, ಶಶಿ ಹಿರೇಮಠ ಸೇರಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.