ರಾಯಚೂರು: ರಾಜ್ಯ ಸರ್ಕಾರ ಜಿಲ್ಲೆಯ ರಾಯಚೂರು, ಮಾನ್ವಿ, ಸಿಂಧನೂರು ಈ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಉಳಿದ ತಾಲೂಕಿನ ರೈತಾಪಿ ವರ್ಗದ ಬೇಸರಕ್ಕೆ ಕಾರಣವಾಗಿದೆ. ನೀರಾವರಿ ಪ್ರದೇಶದಲ್ಲೇ ಈ ಬಾರಿ ಸಕಾಲಕ್ಕೆ ನೀರು ಸಿಗದೆ ಸಂಕಷ್ಟ ಎದುರಿಸಿದ್ದು, ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಎಂದು ಘೊಷಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆದರೆ, ಈ ಮಳೆ ಆರಂಭದಲ್ಲಿ ಅನುಕೂಲಕರವಾಗಿದ್ದರೂ ಕೊನೆಕೊನೆಗೆ ರೈತರಿಗೆ ನಷ್ಟವನ್ನೇ ಉಂಟು ಮಾಡಿದೆ. ಅಲ್ಲದೇ, ಜಲಾನಯನ ಪ್ರದೇಶದಲ್ಲಿ ಸುರಿದ ಭೀಕರ ಮಳೆಯಿಂದ ಕೃಷ್ಣೆ, ತುಂಗಭದ್ರೆ ತುಂಬಿ ಹರಿದು ಸಾವಿರಾರು ಟಿಎಂಸಿ ನೀರು ವ್ರಥಾ ಹರಿದರೂ ಜಿಲ್ಲೆಯಲ್ಲಿ ಮಳೆ ಕೊರತೆ ಕಾಡಿತ್ತು. ಮತ್ತೂಂದೆಡೆ ನದಿಗೆ ನೀರು ಹರಿದರೂ ಕೊನೆ ಭಾಗದ ರೈತರಿಗೆ ನೀರು ತಲುಪಿರಲಿಲ್ಲ.
ಸಿಂಧನೂರು, ದೇವದುರ್ಗ ಹಾಗೂ ಲಿಂಗಸುಗೂರಿನ ಆಯ್ದ ಭಾಗ ಮಾತ್ರ ನೀರಾವರಿ ವಲಯಕ್ಕೆ ಒಳಪಟ್ಟಿದ್ದು, ಉಳಿದೆಲ್ಲ ಕಡೆ ಮಳೆಯಾಶ್ರಿತ ಭೂಮಿ ಇದೆ. ಆದರೆ, ಸಕಾಲಕ್ಕೆ ಮಳೆ ಬಾರದ ಕಾರಣ ಇಳುವರಿ ಚನ್ನಾಗಿ ಬಂದಿಲ್ಲ. ಕಳೆದ ತಿಂಗಳವರೆಗೂ ಜಿಲ್ಲೆಯಲ್ಲಿ ಶೇ.41ರಷ್ಟು ಮಳೆ ಕೊರತೆ ಇತ್ತು. ಈಚೆಗೆ ಸುರಿದ ಮಳೆಯಿಂದ ಆ ಪ್ರಮಾಣ ಕುಗ್ಗಿದೆ. ಆದರೆ, ಮುಂಗಾರು ಬಿತ್ತನೆ ಮಾಡಿದ ರೈತರಿಗೆ ಈ ಮಳೆ ಅಷ್ಟೊಂದು ಪೂರಕವಾಗಿಲ್ಲ. ಇದರಿಂದ ಎಲ್ಲೆಡೆ ಬರದ ಛಾಯೆ ಇದೆ.
ಎಲ್ಲೆಡೆ ಬರ ತಾಂಡವ: ದೇವದುರ್ಗ, ಲಿಂಗಸುಗೂರು ತಾಲೂಕುಗಳು ಈ ಬಾರಿ ಬರಕ್ಕೆ ತುತ್ತಾಗಿವೆ. ಅಲ್ಪ ಪ್ರಮಾಣದ ಪ್ರದೇಶ ನೀರಾವರಿ ವಲಯಕ್ಕೆ ಒಳಗಾಗಿದ್ದರೂ ಬಹುತೇಕ ಕಡೆ ಮಳೆಯಾಶ್ರಿತ ಕೃಷಿಯನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಆದರೆ, ಸರ್ಕಾರ ನೀರಾವರಿಗೆ ಒಳಪಟ್ಟ ಸಿಂಧನೂರನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಬರಪೀಡಿತ ದೇವದುರ್ಗ, ಲಿಂಗಸುಗೂರು ಉಳಿದ ತಾಲೂಕುಗಳನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಬಿತ್ತಿದ್ದ ಬೆಳೆ ಕೆಡಿಸಿದ ರೈತರು: ರೈತರು ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ ಬೆಳೆಯನ್ನು ಸಕಾಲಕ್ಕೆ ಮಳೆ ಬಾರದ ಕಾರಣಕ್ಕೆ ಕೆಡಿಸಿದ್ದರು. ಉಳಿದ ರೈತರು ಮಳೆಗಾಗಿ ಕಾದು ಕಾದು ಸುಸ್ತಾದರು.
ಕೊನೆ ಗಳಿಗೆಯಲ್ಲಿ ಸುರಿದ ಮಳೆಯಿಂದ ಕೆಲವೆಡೆ ಬೆಳೆ ಚೇತರಿಕೆ ಕಂಡರೆ ಉಳಿದ ಕಡೆ ಮಳೆ ಅಷ್ಟೇನು ಚೆನ್ನಾಗಿ ಬಾರದ ಇಳುವರಿ ಕುಂಠಿತಗೊಂಡಿದೆ. ಈಗ ಎಡೆಬಿಡದೆ ಮಳೆ ಸುರಿದ ಪರಿಣಾಮ ಬೇರು ಕಾಂಡ ಕೊಳೆತು ಬೆಳೆ ನಷ್ಟದ ಭೀತಿ ಎದುರಾಗಿದೆ.
ಬರ, ನೆರೆ ಮಧ್ಯೆ ನಲುಗಿ ಹೋಗಿರುವ ಜಿಲ್ಲೆಯ ಜನರಿಗೆ ಈ ಬಾರಿ ನಿರೀಕ್ಷಿತ ಮಟ್ಟದ ಫಸಲು ಸಿಗುವುದು ಕಷ್ಟವಾಗಿದೆ. ಹೀಗಾಗಿ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂಬುದು ರೈತಾಪಿ ವರ್ಗದ ಒತ್ತಾಯವಾಗಿದೆ.