Advertisement

Raichur: ರೈತರ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲ- ಬಡಗಪುರ

06:12 PM Sep 04, 2023 | Team Udayavani |

ರಾಯಚೂರು: ರಾಜ್ಯ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರೈತರನ್ನು ಒಗ್ಗೂಡಿಸಿ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಪುರ ನಾಗೇಂದ್ರ ದೂರಿದರು.

Advertisement

ನಗರದ ಜೆಸಿ ಭವನದಲ್ಲಿ ರವಿವಾರ ರಾಜ್ಯ ರೈತ ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಕಾರ್ಯಾಗಾರ ಮತ್ತು ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಮಳೆಯಾಶ್ರಿತ ಕೃಷಿ ಮಾಡಲಾಗುತ್ತಿದೆ. ಈ ಬಾರಿ ಮಳೆ ಕೊರತೆ ಎದುರಾಗಿ 130 ತಾಲೂಕುಗಳಲ್ಲಿ ಬರ ಇದ್ದರೂ ಸರ್ಕಾರ ಬರ ಘೋಷಣೆ ಮಾಡಲು ಮುಂದಾಗುತ್ತಿಲ್ಲ. ರೈತರು ಬೆಳೆ ನಷ್ಟಕ್ಕೀಡಾದರೆ, ಬೆಳೆ ನಷ್ಟ ಪರಿಹಾರ ನೀಡಲು ಹಳೆಯ ಎನ್‌ಡಿಆರ್‌ ಎಫ್‌ ನಿಯಮವನ್ನೇ ಅನುಸರಿಸಲಾಗುತ್ತಿದೆ. ಈ
ನಿಯಮಗಳನ್ನು ಬದಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೊಡಬೇಕಿರುವ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕು . ಎನ್‌ಡಿಆರ್‌ಎಫ್‌ ನಿಯಮಗಳ ಪರಿಷ್ಕರಿಸಿ ಬರ ಮತ್ತು ಅತಿವೃಷ್ಠಿ ಪರಿಹಾರಕ್ಕಾಗಿ ಅನುದಾನ ನಿಗದಿಪಡಿಸಬೇಕು ಎಂದರು. ಬರಗಾಲ ಘೋಷಣೆ ನಂತರ ಜಾನುವಾರುಗಳಿಗೆ ಮೇವು ಒದಗಿಸಬೇಕು, ಗಂಜಿ ಕೇಂದ್ರ ಮಾಡುವುದು, ಪರಿಹಾರ ನೀಡುವುದಲ್ಲ.

ಶಾಶ್ವತವಾಗಿ ಬರ ಹೊಗಲಾಡಿಸಲು ರೈತ ಸಂಘಟನೆ ಸರ್ಕಾರಕ್ಕೆ ಸಲಹೆಗಳನ್ನು ನೀಡಿದೆ. ಅವುಗಳ ಬಗ್ಗೆ ಅವಲೋಕನ ಮಾಡಬೇಕು ಎಂದು ಹೇಳಿದರು. ಸರ್ಕಾರ ಸಣ್ಣ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೆರೆ ಕಟ್ಟೆಗಳು ನಂಬಿ ರೈತರು ಜೀವನ ಮಾಡುವಂತಾಗಬೇಕು. ಉದ್ಯೋಗ ಖಾತ್ರಿ ಯೋಜನೆ 200 ದಿನಕ್ಕೆ ವಿಸ್ತರಿಸಬೇಕು, ಫಸಲ್‌. ವಿಮಾ ಯೋಜನೆಯಡಿ ಸಾಕಷ್ಟು ಅಕ್ರಮಗಳಾಗಿದ್ದು, ವಿಮೆ ಪಾವತಿಸದ ರೈತರಿಗೆ ಪರಿಹಾರ ಹಣ ಸಿಗುತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಮಾತನಾಡಿ, ರೈತರು ಒಗ್ಗೂಡಿ ಹೋರಾಡಿದಾಗಲೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯ. ಪ್ರತಿ ಗ್ರಾಮದಲ್ಲಿ ರೈತ ಸಂಘಟನೆ ಸ್ಥಾಪಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಒತ್ತು ನೀಡಬೇಕಿದೆ ಎಂದರು. ರೈತರಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕಿದೆ.

Advertisement

ಅಂದಾಗ ಮಾತ್ರ ನಮಗೇನು ಬೇಕು ಕೇಳಿ ಪಡೆಯುವ ಶಕ್ತಿ ಬರುತ್ತದೆ. ಎಂಥ ಸಮಸ್ಯೆಗಳು ಎದುರಾದರೂ ಎದೆಗುಂದದೆ ಎದುರಿಸಬೇಕು. ರೈತರ ಸಂಘಟನೆಯಾದರೆ ಸರ್ಕಾರಗಳು ಗಮನ ಹರಿಸುತ್ತವೆ. ರಾಜ್ಯದಲ್ಲಿ ಅನೇಕ ರೈತ ಸಂಘಟನೆಗಳು ಶುರುವಾಗಿದ್ದು, ನಮ್ಮ ಸಂಘಟನೆ ಭಿನ್ನವಾಗಿದೆ. ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದರೆ,ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ, ಸತ್ಯಂಪೇಟೆ ಮಲ್ಲಿಕಾರ್ಜುನ, ಮಹಿಳಾ ರಾಜ್ಯಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಯಶೋದಾ, ರವಿ ಕಿರಣ, ದೊಡ್ಡ ಬಸನಗೌಡ, ಗೋಣೆ ಬಸಪ್ಪ, ಸೂಗುರಯ್ಯ ಆರ್‌ ಎಸ್‌ ಮಠ, ಯಂಕಪ್ಪ ಕಾರಿಬಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next