Advertisement

ಸ್ವಚ್ಛತೆಯನ್ನೇ ಮರೆತ ರಾಯಚೂರು ನಗರಸಭೆ!

05:38 PM Jun 17, 2021 | Team Udayavani |

ರಾಯಚೂರು: ಎರಡು ವರ್ಷಗಳ ಬಳಿಕ ನಗರಸಭೆಗೆ ಆಡಳಿತ ಮಂಡಳಿ ರಚನೆಯಾಗಿದ್ದು, ಜನರ ಸಮಸ್ಯೆಗಳು ಬಗೆ ಹರಿಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ನಗರದ ಸ್ಥಿತಿಗತಿ ನೋಡುತ್ತಿದ್ದರೆ ಇದೆಂಥ ನಗರಾಡಳಿತವೋ ಎನ್ನದೆ ಇರಲಾಗದು. ಯಾವುದೇ ನಗರ ಸುಂದರವಾಗಿ ಕಾಣಬೇಕಾದರೆ ಅಲ್ಲಿ ತ್ಯಾಜ್ಯ ವಿಲೇವಾರಿ ಪ್ರಮುಖ ಆದ್ಯತೆ ಆಗಿರಬೇಕು. ಆದರೆ, ಮಹಾನಗರ ಪಾಲಿಕೆಗೆ ಬಡ್ತಿ ಪಡೆಯುವ ಹುಮ್ಮಸ್ಸಿನಲ್ಲಿರುವ ರಾಯಚೂರು ನಗರಸಭೆಗೆ ಸ್ವತ್ಛತೆ ವಿಚಾರವೇ ಕಾಲಕಸವಾಗಿದೆ.

Advertisement

ಉಳ್ಳವರ ಬಡಾವಣೆಗಳು, ಅ ಧಿಕಾರಿಗಳು ಓಡಾಡುವ ರಸ್ತೆಗಳು ಬಿಟ್ಟರೆ ಉಳಿದೆಡೆ ತ್ಯಾಜ್ಯ ವಿಲೇವಾರಿ ಅಗತ್ಯವೇ ಇಲ್ಲವೇನೊ ಎನ್ನುವ ಸ್ಥಿತಿ ಇದೆ. ನಗರಸಭೆ ಚುಕ್ಕಾಣಿ ಹಿಡಿದ ಮಾದರಿ ನಗರ ಮಾಡುವ ರೋಷಾವೇಷದ ಮಾತಗಳನ್ನಾಡಿದ ಅಧ್ಯಕ್ಷ ಈ.ವಿನಯಕುಮಾರ್‌ ಈ ವಿಚಾರದಲ್ಲಿ ಮೌನಕ್ಕೆ ಶರಣಾದಂತಿದೆ. ಅಧಿ ಕಾರಿಗಳು ಹಾಗೂ ಜನಪ್ರತಿನಿ ಧಿಗಳು ನಡುವಿನ ಸಮನ್ವಯತೆ ಕೊರತೆ ಎದ್ದು ಕಾಣಿಸುತ್ತಿದೆ. ಇಬ್ಬರ ನಡುವೆ ಜನರಿಗೆ ಸಂಕಷ್ಟ ತಪ್ಪದಂತಾಗಿದೆ. ನಗರದ ಪ್ರಮುಖ ರಸ್ತೆಗಳು, ಸರ್ಕಾರಿ ಕಚೇರಿಗಳ ಆಸುಪಾಸಿನಲ್ಲೇ ಘನ ತ್ಯಾಜ್ಯ ಕಣ್ಣಿಗೆ ರಾಚುತ್ತದೆ.

ನಗರದ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ಇರುವುದು ಘನ ತ್ಯಾಜ್ಯಗಳ ಮಧ್ಯೆ ಎನ್ನುವಷ್ಟರ ಮಟ್ಟಿಗೆ ಪರಿಸರ ಹದಗೆಟ್ಟಿದೆ. ಕಚೇರಿ ಮುಂದೆ ಹಂದಿಗಳದ್ದೇ ಸಾಮ್ರಾಜ್ಯ. ಕಚೇರಿಗೆ ಬರುವ ಸಿಬ್ಬಂದಿ, ಜನ ಮೂಗು ಮುಚ್ಚಿಕೊಂಡೆ ಓಡಾಡುವ ಸ್ಥಿತಿ ಇದೆ. ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಕೆಲ ಕಾಲ ಮಳೆ ಸುರಿಯುತ್ತಿದ್ದಂತೆ ಚರಂಡಿಗಳೆಲ್ಲ ತುಂಬಿ ಹರಿದಿವೆ. ಇದರಿಂದ ಪ್ಲಾಸ್ಟಿಕ್‌ ಸೇರಿದಂತೆ ಘನತ್ಯಾಜ್ಯವೆಲ್ಲ ರಸ್ತೆಗೆ ಹರಡಿಕೊಂಡಿದೆ. ಕಾಲುವೆಗಳನ್ನು ಕಾಲಕಾಲಕ್ಕೆ ಸ್ವತ್ಛಗೊಳಿಸದಿರುವುದೇ ಈ ಸಮಸ್ಯೆಗೆ ಕಾರಣ ಎಂದು ಗೊತ್ತಿದ್ದರೂ ನಗರಾಡಳಿತ ಈ ವಿಚಾರದಲ್ಲಿ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡಬೇಕು.

ತ್ಯಾಜ್ಯ ವಿಲೇವಾರಿ ಬೇಕಾಬಿಟ್ಟಿ: ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ನಗರ ನಿವಾಸಿಗಳು. ವಾಹನಗಳು ತ್ಯಾಜ್ಯವನ್ನೆಲ್ಲ ತುಂಬದೆ ಅರ್ಧಂಬರ್ಧ ತುಂಬಿಕೊಂಡು ಹೋಗುತ್ತಾರೆ. ಇದರಿಂದ ಉಳಿದ ತ್ಯಾಜ್ಯ ಮತ್ತೆ ಚರಂಡಿ ಸೇರಿಕೊಳ್ಳುತ್ತದೆ. ಅಲ್ಲದೇ, ಹಸಿ ತ್ಯಾಜ್ಯ, ಒಣ ತ್ಯಾಜ್ಯ ಬೇರ್ಪಡುವ ಕಾರ್ಯವೂ ಸರಿಯಾಗಿ ಆಗುತ್ತಿಲ್ಲ. ಇದರಿಂದ ಚರಂಡಿಗಳಲ್ಲೆಲ್ಲ ತ್ಯಾಜ್ಯದಿಂದ ತುಂಬಿ ಹೋಗುತ್ತಿವೆ.

ಮಳೆಗಾಲದ ಆತಂಕ: ಘನತ್ಯಾಜ್ಯಕ್ಕೂ ಮಳೆನೀರು ಮನೆಗಳಿಗೂ ನುಗ್ಗುವುದಕ್ಕೂ ಅವಿನಾಭಾವ ನಂಟಿದೆ. ಕೆಲವೊಂದು ಬಡಾವಣೆಗಳ ನಿವಾಸಿಗಳಿಗೆ ಮಳೆಗಾಲ ಬಂದರೆ ಸಾಕು ಆತಂಕ ಶುರುವಾಗುತ್ತದೆ. ಕೊಂಚ ಮಳೆ ಬಂದರೂ ನೀರು ಮನೆಗಳಿಗೆ ನುಗ್ಗುತ್ತದೆ. ಕಳೆದ ವರ್ಷವೇ ಈ ಬಗ್ಗೆ ಸೂಕ್ತ ವಹಿಸುವ ಭರವಸೆ ನೀಡಿದ್ದ ಅ ಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈಗ ಮತ್ತೆ ಮಳೆಗಾಲ ಶುರುವಾಗಿದ್ದು, ಮತ್ತದೆ ಸಮಸ್ಯೆ ಎದುರಾಗುವ ಆತಂಕ ಮನೆ ಮಾಡಿದೆ. ಚರಂಡಿಗಳೆಲ್ಲ ಘನ ತ್ಯಾಜ್ಯದಿಂದ ತುಂಬಿ ಹೋಗಿದ್ದು, ಮಳೆ ಬಂದರೆ ಸಾಕು ಚರಂಡಿ ನೀರೆಲ್ಲ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next