ರಾಯಚೂರು: ಯಾವ ದೇಶದಲ್ಲಿ ಸ್ತ್ರೀಯರಿಗೆ ಆದರಾತಿಥ್ಯ ನೀಡಿ ಗೌರವಿಸುವ ಪರಿಪಾಟ ಇರುತ್ತದೆಯೋ, ಆ ದೇಶ ಸುಭಿಕ್ಷವಾಗಿರಲಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದು, ಪ್ರಾಬಲ್ಯ ಸಾಧಿ ಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚಿನ ಸಹಕಾರ ಬೇಕಿದ್ದು, ಸಮಾಜದ ಪ್ರತಿ ವ್ಯಕ್ತಿಯೂ ಇದಕ್ಕೆ ಬದ್ಧರಾಗಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ ಆರೋಗ್ಯವಂತರನ್ನಾಗಿ ಮಾಡಿದಾಗ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ಹೆಣ್ಣುಮಕ್ಕಳಲ್ಲೂ ಸಾಕಷ್ಟು ಆರೋಗ್ಯ ಸಮಸ್ಯೆ ಇದ್ದು, ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸದೃಢರಾಗಲು ಕರೆ ನೀಡಿದರು.
ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಮಹಿಳಾ ದಿನಾಚರಣೆಗಾಗಿ ಒಂದು ದಿನ ಮೀಸಲಿಟ್ಟಿರುವುದು ಖುಷಿಯ ವಿಚಾರ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವಂತೆ ಮಹಿಳೆ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾಳೆ. ಎಲ್ಲ ರಂಗದಲ್ಲೂ ಛಾಪು ಮೂಡಿಸಿದ್ದಾಳೆ. ಆದರೆ, ಪುರುಷರ ಸಹಕಾರವಿಲ್ಲದೇ ಮಹಿಳೆಯರು ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಕನಸುಗಳಿಗೆ ಪುರುಷರು ಬೆನ್ನೆಲುಬಾಗಿ ನಿಲ್ಲಬೇಕು. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ, ಹೆಣ್ಣು ಜನಿಸಿದರೆ ಬೇಸರ ಪಡದೆ, ಸರ್ಕಾರ ನೀಡುವ ಪ್ರತಿ ಸೌಲಭ್ಯ ಬಳಸಿಕೊಳ್ಳಬೇಕು. ವೈಯಕ್ತಿಕ ಶೌಚಗೃಹಗಳನ್ನು ಬಳಸಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗಿನಿ ಸ್ಮಿತಾ ಅಕ್ಕ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ ಚನ್ನಾಳ, ಎಡಿಸಿ ದುರುಗೇಶ, ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ| ಅನುಪಮಾ ಸಿ. ವಿಶೇಷ ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.