ರಾಯಚೂರು: ರಾಯಚೂರು ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಎರಡನೇ ದಿನ ರವಿವಾದ ಕಾರಣ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರ ಸೇರಿದಂತೆ ಸುತ್ತಲಿನ ಜನ ಹೆಚ್ಚಾಗಿ ಬಂದ ಕಾರಣ ವ್ಯಾಪಾರ ವಹಿವಾಟು ತುಸು ಜೋರಾಗಿಯೇ ನಡೆಯಿತು.
ಬಹುತೇಕರು ಕುಟುಂಬ ಸಮೇತರಾಗಿ ರಜೆ ಮಜಾ ಕಳೆಯಲು ಬಂದಂತೆ ಭಾಸವಾಯಿತು. ಮಳಿಗೆಗಳಲ್ಲಿ ಅಳವಡಿಸಿರುವ ಬಟ್ಟೆ, ತಿಂಡಿ, ಗೃಹೋಪಯೋಗಿ ವಸ್ತುಗಳ ಕಡೆಯೇ ಎಲ್ಲರ ಚಿತ್ತ ಹರಿದಿತ್ತು. ಇದರಿಂದ ಕೃಷಿ ಆಧಾರಿತ ಮಳಿಗೆಗಳು ತುಸು ಮಂಕಾದಂತೆ ಕಂಡು ಬಂದವು.
ಬೆಳಗ್ಗೆ 11 ಗಂಟೆಗೆ ಶುರುವಾಗಬೇಕಿದ್ದ ಉದ್ಘಾಟನೆ ಕಾರ್ಯಕ್ರಮ 12 ಗಂಟೆಗೆ ಶುರುವಾಗಿತ್ತು. ಆದರೂ ಜನ ಕಾರ್ಯಕ್ರಮದಲ್ಲಿ ಕುಳಿತು ಆಲಿಸಿದರು. ಬಳಿಕ ಮಧ್ಯಾಹ್ನ ನಡೆದ ರೈತರೊಂದಿಗೆ ರೈತರು ಸಂವಾದ ಕಾರ್ಯಕ್ರಮಕ್ಕೆ ಜನಾಭಾವ ಕಂಡು ಬಂತು. ಜನರೆಲ್ಲ ಸುತ್ತಲಿನ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ಕಂಡು ಬಂತು.
ಸಾವಯವ ಮರೆ: ಕೃಷಿ ಮೇಳದಲ್ಲಿ ಖಾಸಗಿ ಕಂಪನಿಗಳ ಆರ್ಭಟ ತುಸು ಹೆಚ್ಚಾಗಿ ಕಂಡು ಬರುತ್ತಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಎಂಬ ಕಲ್ಪನೆ ಇದ್ದರೂ ವ್ಯಾಪಾರಿಗಳು ಯಾಕೋ ಈ ಬಾರಿ ಮುಖ ಮಾಡಿಲ್ಲ. ಕಳೆದ ಬಾರಿ ಸಾವಯವ ಮಳಿಗೆ ಹಾಕಿದ ವರ್ತಕರಿಗೆ ನಷ್ಟವಾಗಿತ್ತು. ಹೀಗಾಗಿ ದುಬಾರಿ ಹಣ ತೆತ್ತು ಮಳಿಗೆ ಹಾಕಿದರೆ ಲಾಭವಿಲ್ಲ ಎಂಬ ಕಾರಣಕ್ಕೆ ದೂರ ಉಳಿದಂತೆ ಕಂಡು ಬಂತು. ಆದರೆ, ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳ ಪ್ರದರ್ಶನಕ್ಕೆ ಖಾಸಗಿ ಕಂಪನಿಗಳು ಪೈಪೋಟಿಯಲ್ಲಿ ಮಳಿಗೆ ಹಾಕಿದ್ದು ತರಹೇವಾರಿ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಜಲಾನಯನ ಮಾದರಿ: ಇನ್ನು ಕೃಷಿ ಇಲಾಖೆಯಿಂದ ರೂಪಿಸಿದ ಜಲಾನಯನ ಪರಿಕಲ್ಪನೆಯ ಮಾದರಿ ಸಾರ್ವಜನಿಕರನ್ನು ಬರ ಸೆಳೆಯುತ್ತಿದೆ. ನೀರಿನ ಇಂಗುವಿಕೆ, ಸಮಗ್ರ ಕೃಷಿ ಪದ್ಧತಿ ಹಾಗೂ ಜಲಮರುಪೂರಣ ವಿವರಿಸುವ ಪ್ರಾತ್ಯಕ್ಷಿಕೆ ರಚಿಸಿದ್ದು, ಆಕರ್ಷಣೀಯವಾಗಿದೆ. ಸುಮಾರು 20×20 ಅಳತೆಯ ದೊಡ್ಡ ಸ್ಥಳದಲ್ಲಿ ಬೃಹತ್ ಮಾದರಿಯನ್ನು ರಚಿಸಲಾಗಿದೆ. ಬೆಟ್ಟದ ಮೇಲಿಂದ ಹರಿಯುವ ನೀರನ್ನು ಹೇಗೆಲ್ಲ ಸಂರಕ್ಷಿಸಹುದು. ಅದರಿಂದ ಹೇಗೆ ಕೃಷಿ ಮಾಡಬೇಕು ಎನ್ನುವ ಮಾಹಿತಿ ನೀಡುವ ಪ್ರಾತ್ಯಕ್ಷಿಕೆ ಇದಾಗಿದೆ.
ಚೋಟಾ ಚಾರಮಿನಾರ್: ಇನ್ನು ಮೇಳದಲ್ಲಿ ಚೋಟಾ ಚಾರಮಿನಾರ್ ಗಮನ ಸೆಳೆಯುತ್ತಿದೆ. ಖಾಸಗಿ ಕಂಪನಿಯವರು ತಮ್ಮ ಕಂಪನಿಯ ಕ್ರಿಮಿನಾಶಕದ ಪ್ರಚಾರಾರ್ಥ ಇದನ್ನು ನಿರ್ಮಿಸಿದ್ದಾರೆ. ಕಟ್ಟಿಗೆಯಿಂದ ನಿರ್ಮಿಸಿರುವ ಈ ಕಲಾಕೃತಿ ನೋಡಲು ಆಕರ್ಷಕವಾಗಿದ್ದು, ಎಲ್ಲರನ್ನು ಬರೆ ಸೆಳೆಯುತ್ತಿದೆ. ಹೈದರಾಬಾದ್‌ನ ಚಾರ್ ಮಿನಾರ್ ನೋಡದವರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೇ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಕೃಷಿ ಮೇಳ ರವಿವಾರದ ರಜೆಯ ಮಜಾವನ್ನಂತೂ ಮೂಡಿಸಿದ್ದು ಸುಳ್ಳಲ್ಲ. ಸೋಮವಾರ ಸಮಾರೋಪ ಜರುಗಲಿದ್ದು, ಕೊನೆ ದಿನ ನಾನಾ ಕಾರ್ಯಗಳ ನಿಮಿತ್ತ ನಗರಕ್ಕೆ ಸಾಕಷ್ಟು ಜನ ಬರುವುದರಿಂದ ಅಂದು ಕೂಡ ಜನ ಸೇರುವ ನಿರೀಕ್ಷೆಯಿದೆ.