Advertisement

ರಾಹುಲ್‌ ಬಳಿ ಜಾರಕಿಹೊಳಿ ಹೊಸ ಬೇಡಿಕೆ?

05:39 PM May 24, 2017 | Harsha Rao |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿರಂತರ ಪೈಪೋಟಿ ಹೆಚ್ಚಾಗುತ್ತಿದ್ದು, ಈಗ ಸಿಎಂ ಸಿದ್ದರಾಮಯ್ಯ ಜತೆ ಮುನಿಸಿಕೊಂಡಿರುವ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಎದುರು ಹೊಸ ಬೇಡಿಕೆ ಇಟ್ಟಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ, ಉತ್ತರ
ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ ನೀಡುವುದಾದರೆ, ಹಿಂದುಳಿದ ವರ್ಗದವರಿಗೆ ನೀಡಿ ಎಂದು ಆಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯಕ್ಕಿಂತ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಅಲ್ಲದೆ ಲಿಂಗಾಯತ ಸಮುದಾಯ ಬಿಜೆಪಿ ಕಡೆಗೆ ಹೆಚ್ಚಿನ ಒಲವು ತೋರಿರುವುದರಿಂದ ಉತ್ತರ ಕರ್ನಾಟಕ ಭಾಗದ ಹಿಂದುಳಿದ ವರ್ಗದ ನಾಯಕರಿಗೆ ಪಕ್ಷದ ನಾಯಕತ್ವ ನೀಡಿದರೆ, ಈ ಭಾಗದಲ್ಲಿ ಹೆಚ್ಚಿನ ಸ್ಥಾನ
ಗೆಲ್ಲಲು ಅನುಕೂಲವಾಗುತ್ತದೆ ಎಂದು ರಾಹುಲ್‌ ಮುಂದೆ ವಾದ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಮಟ್ಟದಲ್ಲಿ ಅಷ್ಟೊಂದು ವರ್ಚಸ್ಸು ಇಲ್ಲದ ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್‌.ಆರ್‌.ಪಾಟೀಲ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಾದರೆ, ಅವರಿಗಿಂತ ತಾವೂ ಪ್ರಭಾವಿಯಾಗಿರುವುದರಿಂದ ಪರೋಕ್ಷವಾಗಿ ಅಧ್ಯಕ್ಷ ಗಾದಿಗೆ ತಮ್ಮನ್ನೂ ಪರಿಗಣಿಸಬಹುದೆಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದ್ದು, ಮುಖ್ಯಮಂತ್ರಿ ತಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಗೊಂದಲಗಳ ಬಗ್ಗೆಯೂ ರಾಹುಲ್‌
ಗಾಂಧಿಯವರ ಗಮನ ಸೆಳೆದಿದ್ದಾರೆ. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ವಿರುದ್ಧವೂ ದೂರು ನೀಡಿದ್ದು, ಅವರನ್ನು ಹತೋಟಿಯಲ್ಲಿಡುವಂತೆ ರಾಹುಲ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸತೀಶ್‌ ಜಾರಕಿಹೊಳಿಯೊಂದಿಗೆ ಸುಮಾರು 40 ನಿಮಿಷ ಮಾತುಕತೆ ನಡೆಸಿರುವ ರಾಹುಲ್‌ ಗಾಂಧಿ, ಸಣ್ಣಪುಟ್ಟ ಗೊಂದಲಗಳಿಗೆ ತಲೆಕೆಡಿಸಿಕೊಳ್ಳದೆ, ಪಕ್ಷದ ಸಂಘಟನೆಗೆ ಗಮನ ನೀಡುವಂತೆ ಸೂಚಿಸಿದ್ದಾರೆ. “ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದು ತಾತ್ಕಾಲಿಕ ಬದಲಾವಣೆ. ಪಕ್ಷ ನಿಮ್ಮನ್ನು ಕಡೆಗಣಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ತೊರೆಯುವ ಆಲೋಚನೆ ಮಾಡಬೇಡಿ’ ಎಂದು ಸೂಚಿಸಿದ್ದಾರಂತೆ. ಈ ಭೇಟಿ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಇಲ್ಲಿಯೇ ಜಗಳ ಮಾಡಿಕೊಂಡು ಹೋಗಿದ್ದಾರೆ ಎಂದರು. ನಂತರ ತಮ್ಮ ಮಾತಿನ ವರಸೆ ಬದಲಿಸಿ, “ಅವರು ನಿನ್ನೆಯೇ ಇಲ್ಲಿ ಒಂದಾಗಿ ಹೋಗಿದ್ದಾರೆ.

ಸತೀಶ್‌ ನನ್ನ ವಿರುದ್ಧ ದೂರು ನೀಡಲು ಹೋಗಿದ್ದಾರೆ ಎನ್ನುವುದು ಸುಳ್ಳು. ರಾಹುಲ್‌ ಗಾಂಧಿ ರಾಷ್ಟ್ರದ ಎಲ್ಲ ಎಸ್ಟಿ ಮುಖಂಡರ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ’ ಎಂದು ಸಮಜಾಯಿಷಿ ನೀಡಿದರು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಸ್ಟಿ ಸಮುದಾಯದ ಸಭೆಯಲ್ಲಿ ಪಾಲ್ಗೊಳ್ಳಲು ಸತೀಶ್‌ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ ಎಂದು ಹೇಳಿದರು. ಜಿಲ್ಲಾ ಮುಖಂಡರ ಸಭೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು
ಬಗೆ ಹರಿಸುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಪರಮೇಶ್ವರ್‌ ಹೇಳಿದರು. 

Advertisement

ಸರ್ಕಾರಿ ಕಾರು ಬೇಡವೆಂದ ವೇಣುಗೋಪಾಲ್‌
ಬೆಂಗಳೂರು:
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ರಾಜ್ಯ ಸರ್ಕಾರ ನೀಡಿರುವ ಸರ್ಕಾರಿ ಕಾರನ್ನು ವಾಪಸ್‌ ನೀಡಿ ಪಕ್ಷದ ಕಾರು ಬಳಕೆ ಮಾಡಿದ್ದಾರೆ. ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ
ಸಂಸದರಿಗೆ ರಾಜ್ಯ ಸರ್ಕಾರವೇ ಕಾರು ಬಳಕೆಗೆ ಕಾರು ನೀಡುತ್ತದೆ. ಅದರಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್‌ ಅವರಿಗೆ ಸರ್ಕಾರ ಫಾರ್ಚುನರ್‌ ಕಾರು ನೀಡಿತ್ತು. ಮೊದಲ ಬಾರಿಗೆ ಬಂದಾಗ ಸರ್ಕಾರಿ ಕಾರು ಬಳಸಿದ್ದ ವೇಣುಗೋಪಾಲ್‌, ಈ ಬಾರಿ ಸರ್ಕಾರಿ ಕಾರು ನಿರಾಕರಿಸಿ, ಕೆಪಿಸಿಸಿ ಅಧ್ಯಕ್ಷರ ಇನ್ನೋವಾ ಕಾರಿನಲ್ಲಿ ಪಕ್ಷದ ಕಚೇರಿಗೆ ಆಗಮಿಸಿದರು. ಪಕ್ಷದ ಕಾರ್ಯಕ್ಕೆ ಆಗಮಿಸಿರುವುದರಿಂದ ಸರ್ಕಾರದ ಯಾವುದೇ ಸವಲತ್ತು ಬೇಡ ಎಂದು ವೇಣುಗೋಪಾಲ್‌ ತಿಳಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷರಾದರೆ ಐಟಿ ದಾಳಿ ಬೆದರಿಕೆ
ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ಗ‌ೆ “ಐಟಿ’ ದಾಳಿ ಬೆದರಿಕೆ ಹಾಕಲಾಗಿದೆ. ನೀವು ಕೆಪಿಸಿಸಿ ಅಧ್ಯಕ್ಷರಾದರೆ ನಿಮ್ಮ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಸಾಧ್ಯತೆ ಇದೆ. ಸ್ವಲ್ಪ ಹುಷಾರಾಗಿರಿ ಎಂದು ಹಿತೈಷಿಗಳು ಎಂ.ಬಿ.ಪಾಟೀಲ್‌ ಅವರಿಗೆ ಸಲಹೆ
ನೀಡಿದ್ದಾರೆಂದು ಹೇಳಲಾಗಿದೆ. ದೆಹಲಿ ಮೂಲದ ವ್ಯಕ್ತಿಗಳು ಈ ವಿಷಯವನ್ನು ಎಂ.ಬಿ.ಪಾಟೀಲರ ಗಮನಕ್ಕೆ ತಂದಿದ್ದು, ಪಾಟೀಲರು ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ಸಮುದಾಯದವರಾದ ಎಂ.ಬಿ. ಪಾಟೀಲರು ಕೆಪಿಸಿಸಿ ಅಧ್ಯಕ್ಷರಾದರೆ,
ಲಿಂಗಾಯತ ಸಮುದಾಯದ ಮತಗಳು ವಿಭಜನೆ ಆಗುವುದರಿಂದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರು ಅಧ್ಯಕ್ಷರಾಗುವುದನ್ನು ತಪ್ಪಿಸಲು ಬೆದರಿಕೆ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ
ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಎಂ.ಬಿ. ಪಾಟೀಲ್‌ ನಿರಾಕರಿಸಿದ್ದಾರೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಾಂಗ್ರೆಸ್‌ನ ಪ್ರಭಾವಿ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ರೀತಿಯ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next