ಮುಂಬೈ: ಹಲವು ವರ್ಷಗಳಿಂದ ದೇಶೀಯ ಕ್ರಿಕೆಟ್ ಮತ್ತು ಐಪಿಲ್ ನಲ್ಲಿ ಲೋಡುಗಟ್ಟಲೆ ರನ್ ಪೇರಿಸುತ್ತಿದ್ದ ರಾಹುಲ್ ತ್ರಿಪಾಠಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಪಂದ್ಯಗಳ ಸರಣಿಗೆ ರಾಹುಲ್ ಆಯ್ಕೆಯಾಗಿದ್ದಾರೆ.
2017ರಲ್ಲಿ ಮೊದಲ ಬಾರಿಗೆ ರಾಹುಲ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದರು. ಸದ್ಯ ನಿಷ್ಕ್ರಿಯವಾಗಿರುವ ಪುಣೆ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದ ರಾಹುಲ್ ತ್ರಿಪಾಠಿ ತನ್ನ ಬ್ಯಾಟಿಂಗ್ ಕೌಶಲ್ಯದಿಂದ ಗುರುತಿಸಿಕೊಂಡಿದ್ದರು. ಬಳಿಕ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ.
2022ರ ಐಪಿಎಲ್ ಆವೃತ್ತಿಯಲ್ಲಿ ತ್ರಿಪಾಠಿ, ಸನ್ ರೈಸರ್ಸ್ ಹೈದರಾಬಾದ್ ಪರ 158.24 ಸ್ಟ್ರೈಕ್ ರೇಟ್ ನಲ್ಲಿ 413 ರನ್ ಗಳಿಸಿದ್ದರು. ಆದರೆ ಆರೆಂಜ್ ಆರ್ಮಿ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.
ಇದನ್ನೂ ಓದಿ:ರಣಜಿ ಟ್ರೋಫಿ ಸೆಮಿಫೈನಲ್: ತಮೋರೆ ಶತಕ; ಮುಂಬಯಿ ಮೇಲುಗೈ; ಉತ್ತರ ಪ್ರದೇಶ ಕುಸಿತ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗದೇ ಇದ್ದಾಗ ತ್ರಿಪಾಠಿ ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದು ಸಂತಸ ಹಂಚಿಕೊಂಡಿದ್ದಾರೆ. “ಇದು ಬಹಳ ದೊಡ್ಡ ಅವಕಾಶ, ಕನಸು ನನಸಾಗುವ ಕ್ಷಣ. ಆಯ್ಕೆಗಾರರು ಮತ್ತು ಎಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ನನಗೆ ಆಡಲು ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಐಯ್ಯರ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.