Advertisement

ರಾಜ್ಯದಲ್ಲಿ ಬಲ ಕಳೆದುಕೊಂಡ ರಾಹುಲ್‌ ಶಕ್ತಿ

06:00 AM Nov 17, 2018 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಳ ಮಟ್ಟದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದುವ ಉದ್ದೇಶದಿಂದ ಶುರು ಮಾಡಲಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮಹತ್ವಾಕಾಂಕ್ಷಿ  ಶಕ್ತಿ  ಯೋಜನೆಗೆ ರಾಜ್ಯದಲ್ಲಿ ಹಿನ್ನಡೆಯಾಗಿದೆ.

Advertisement

ಐವತ್ತು ಲಕ್ಷ ಸದಸ್ಯತ್ವ ಗುರಿ ಇಟ್ಟುಕೊಂಡು ಜುಲೈನಲ್ಲಿ ಶಕ್ತಿ ಯೋಜನೆಗೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಚಾಲನೆ ನೀಡಿದ್ದರು. ಆದರೆ, ಮೂರು ತಿಂಗಳಲ್ಲಿ ಆಗಿರುವುದು ಒಂದೂವರೆ ಲಕ್ಷ ಸದಸ್ಯತ್ವ ಮಾತ್ರ. 

ಶಕ್ತಿ ಯೋಜನೆ ನಮ್ಮ ನಿರೀಕ್ಷೆಯಂತೆ ನಡೆಯುತ್ತಿದೆ. ನವೆಂಬರ್‌ 30 ರೊಳಗೆ ಯೋಜನೆ ಪೂರ್ಣಗೊಳಿಸುವ ಗುರಿಯಿದೆ. ಕೆಲವು ಕ್ಷೇತ್ರಗಳಲ್ಲಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮೈಸೂರು ಭಾಗದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆ ಕ್ಷೇತ್ರಗಳಲ್ಲಿ ವೇಗ ಹೆಚ್ಚಿಸುತ್ತೇವೆ, ಎಂದು  ಶಕ್ತಿ ಯೋಜನೆ ರಾಜ್ಯ ಸಂಯೋಜಕ ಸೂರಜ್‌ ಹೆಗಡೆ ತಿಳಿಸಿದ್ದಾರೆ.

ರಾಜ್ಯದ ಮೂವತ್ತು ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿ ಕಂಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ. ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2854 ಜನರು ಸದಸ್ಯರಾಗಿದ್ದರೆ, ಮಂಡ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 98 ಜನ ಸದಸ್ಯರಾಗಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 20 ಸಾವಿರ ಸದಸ್ಯತ್ವ ನೋಂದಣಿ ಮಾಡಲಾಗಿದ್ದು, ಮಂಡ್ಯದ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 20 ಜನ ನೋಂದಣಿಯಾಗಿದ್ದಾರೆ.

ಪಕ್ಷದ ಸಂಘಟನೆಯ ದೃಷ್ಟಿಯಿಂದ ಕಾಂಗ್ರೆಸ್‌ 37 ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದ್ದು, ಬೆಂಗಳೂರು ಉತ್ತರ, ಹುಬ್ಬಳ್ಳಿ-ಧಾರವಾಡ, ಬೀದರ್‌, ವಿಜಯಪುರ, ಗದಗ, ಬೆಂಗಳೂರು ಕೇಂದ್ರÅ, ಮೈಸೂರು ನಗರ, ಚಿಕ್ಕಬಳ್ಳಾಪುರ ಹಾಗೂ ಧಾರವಾಡ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಸದಸ್ಯತ್ವವನ್ನು ದಾಟಿದ್ದು ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ 104 ರಿಂದ 898 ರ ವರೆಗೆ ಸದಸ್ಯತ್ವ ಮಾಡಲಾಗಿದೆ.

Advertisement

ನಾಯಕರ ನಿರಾಸಕ್ತಿ
ಸ್ಥಳೀಯವಾಗಿ ಕೆಳ ಹಂತದ ಕಾರ್ಯಕರ್ತರು ನೇರವಾಗಿ ರಾಹುಲ್‌ ಗಾಂಧಿಯೊಂದಿಗೆ ಸಂಪರ್ಕ ಕಲ್ಪಸಲು ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಕಾರ್ಯಕರ್ತರು ತಮ್ಮ ಮೊಬೈಲ್‌ ನಂಬರ್‌ನಿಂದ ತಮ್ಮ ಓಟರ್‌ ಐಡಿ ನಮೂದಿಸಿ ಸಂದೇಶ ರವಾನಿಸಿದರೆ ರಾಹುಲ್‌ ಗಾಂಧಿಯಿಂದ ಧನ್ಯವಾದದ ಧ್ವನಿ ಮುದ್ರಿತ ಮಾಹಿತಿ ಬರುತ್ತದೆ. ಕೆಳ ಹಂತದ ಕಾರ್ಯಕರ್ತರು ನೇರವಾಗಿ ರಾಹುಲ್‌ ಗಾಂಧಿಯೊಂದಿಗೆ ಸಂಪರ್ಕ ಹೊಂದಿದರೆ, ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅಲ್ಲದೇ ಕಾರ್ಯಕರ್ತರು ತಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. 

ರಾಜ್ಯ ನಾಯಕರ ಸಭೆ:
ನೋಂದಣಿ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಭಾಗವಾರು ಸಭೆ ನಡೆಸುತ್ತಿದ್ದು, ಶುಕ್ರವಾರ ಮೈಸೂರು ವಿಭಾಗದ ಪದಾಧಿಕಾರಿಗಳ ಸಭೆ ನಡೆಸಿ ಯೋಜನೆಯ ವೇಗ ಹೆಚ್ಚಿಸುವಂತೆ ಸೂಚಿಸಿದ್ದಾರೆ. ಶನಿವಾರ ಬೆಳಗಾವಿ ಹಾಗೂ ಬೆಂಗಳೂರು ವಿಭಾಗದ ಪದಾಧಿಕಾರಿಗಳ ಸಭೆ ಹಾಗೂ ನವೆಂಬರ್‌ 20 ರಂದು ಕಲಬುರಗಿ ವಿಭಾಗದ ಜಿಲ್ಲಾಧ್ಯಕ್ಷರು ಹಾಗೂ ಉಸ್ತುವಾರಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. 

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next