Advertisement

Ranchi Test ನಾಟಕೀಯ ತಿರುವು; ರಾಹುಲ್‌ ಲಭ್ಯರಿಲ್ಲ: ತಂಡಕ್ಕೆ ಮುಕೇಶ್‌ ವಾಪಸ್‌

11:16 PM Feb 21, 2024 | Team Udayavani |

ರಾಂಚಿ: ಟೀಮ್‌ ಇಂಡಿಯಾದ ಟೆಸ್ಟ್‌ ತಂಡ ಮತ್ತೂಂದು ನಾಟಕೀಯ ತಿರುವು ಪಡೆದಿದೆ. ರಾಂಚಿಯಲ್ಲಿ ನಡೆಯುವ 4ನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ ಎಂಬಂತಿದ್ದ ಕೆ.ಎಲ್‌. ರಾಹುಲ್‌ ಈಗ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರು ತೊಡೆ ಸಂದು ನೋವಿನಿಂದ ಸಂಪೂರ್ಣ ಚೇತರಿಸಿ ಕೊಂಡಿಲ್ಲ ಎಂಬುದಾಗಿ ಬಿಸಿಸಿಐ ತಿಳಿಸಿದೆ.

Advertisement

ರಾಹುಲ್‌ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಷ್ಟೇ ಆಡಿದ್ದರು. ಇಲ್ಲಿ ಅವರ ಗಳಿಕೆ 86 ಮತ್ತು 22 ರನ್‌. ರಾಜ್‌ಕೋಟ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ಪ್ರಕಟನೆಯೊಂದನ್ನು ನೀಡಿದ ಬಿಸಿಸಿಐ, ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿರುವ ರಾಹುಲ್‌ ಶೇ. 90ರಷ್ಟು ಚೇತರಿಕೆ ಕಂಡಿದ್ದಾರೆ ಎಂದು ತಿಳಿಸಿತ್ತು. ರಾಂಚಿ ಟೆಸ್ಟ್‌ ವೇಳೆ ಸಂಪೂರ್ಣ ಫಿಟ್‌ನೆಸ್‌ಗೆ ಮರಳುವ ಅವರು ತಂಡಕ್ಕೆ ಮರಳಲಿ ದ್ದಾರೆ ಎಂಬ ರೀತಿಯಲ್ಲಿ ವರದಿಯಾಗಿತ್ತು. ಆದರೀಗ ರಾಹುಲ್‌ ರಾಂಚಿ ಟೆಸ್ಟ್‌ನಿಂದಲೂ ಬೇರ್ಪಡಲಿದ್ದಾರೆ. ಇದರೊಂದಿಗೆ ಅವರು ಈ ಸರಣಿಯ ಸತತ 3 ಟೆಸ್ಟ್‌ ಪಂದ್ಯಗಳನ್ನು ಕಳೆದುಕೊಂಡಂತಾಗುತ್ತದೆ. ಫಿಟ್‌ ಆದರಷ್ಟೇ ಧರ್ಮಶಾಲಾದ ಅಂತಿಮ ಟೆಸ್ಟ್‌ನಲ್ಲಿ ಆಡುವರು ಎಂದೂ ಬಿಸಿಸಿಐ ತಿಳಿಸಿದೆ.
ಬುಮ್ರಾಗೆ ರೆಸ್ಟ್‌
ನಿರೀಕ್ಷೆಯಂತೆ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಆವರಿಗೆ ವಿಶ್ರಾಂತಿ ನೀಡಲಾಗಿದೆ. ಕಳೆದ ಕೆಲವು ಸಮಯದಿಂದ ಸತತವಾಗಿ ಆಡುತ್ತಲೇ ಇರುವ ಅವರಿಗೆ ಇದೊಂದು ಪುಟ್ಟ ಬ್ರೇಕ್‌ ಆಗಿದೆ. ಮುಂಬರುವ ಐಪಿಎಲ್‌ ಹಾಗೂ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಇಂಗ್ಲೆಂಡ್‌ ಎದುರಿನ ಸರಣಿಯಲ್ಲಿ ಈಗಾಗಲೇ 80.5 ಓವರ್‌ ಎಸೆದಿರುವ ಬುಮ್ರಾ, 13.64ರ ಸರಾಸರಿಯಲ್ಲಿ ಸರ್ವಾಧಿಕ 17 ವಿಕೆಟ್‌ ಕೆಡವಿದ್ದಾರೆ.

ಬುಮ್ರಾ ಸ್ಥಾನಕ್ಕೆ ಬಂಗಾಲದ ವೇಗಿ ಮುಕೇಶ್‌ ಕುಮಾರ್‌ ಅವರನ್ನು ಮರಳಿ ಕರೆಸಲಾಗಿದೆ. 2ನೇ ಟೆಸ್ಟ್‌ ಪಂದ್ಯದ ಬಳಿಕ ಮುಕೇಶ್‌ ಅವರನ್ನು ರಣಜಿ ತಂಡಕ್ಕೆ ಬಿಟ್ಟುಕೊಡಲಾಗಿತ್ತು. ಬಿಹಾರ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಅವರು 50 ರನ್ನಿಗೆ 10 ವಿಕೆಟ್‌ ಉಡಾಯಿಸಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು.

4ನೇ ಟೆಸ್ಟ್‌ಗೆ ಭಾರತ ತಂಡ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಜತ್‌ ಪಾಟಿದಾರ್‌, ಸರ್ಫರಾಜ್‌ ಖಾನ್‌, ದೇವದತ್ತ ಪಡಿಕ್ಕಲ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಧ್ರುವ ಜುರೆಲ್‌, ಕೆ.ಎಸ್‌. ಭರತ್‌, ಮೊಹಮ್ಮದ್‌ ಸಿರಾಜ್‌, ಮುಕೇಶ್‌ ಕುಮಾರ್‌. ಆಕಾಶ್‌ ದೀಪ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next