Advertisement

ರಾಹುಲ್‌ ಹಸ್ತಧಾರಿ: ನಾಮಪತ್ರ ಸಲ್ಲಿಸಿದ ಏಕೈಕ ನಾಯಕ

06:00 AM Dec 05, 2017 | |

ನವದೆಹಲಿ: ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷದ ಸಾರಥ್ಯ ಸೋನಿಯಾ ಗಾಂಧಿ ಅವರಿಂದ ರಾಹುಲ್‌ ಗಾಂಧಿ ಕಡೆಗೆ ಹೊರಳಿದೆ.

Advertisement

ಕಳೆದ 19 ವರ್ಷಗಳಿಂದ ಕಾಂಗ್ರೆಸ್‌ ಚುಕ್ಕಾಣಿ ಹಿಡಿದಿದ್ದ ಸೋನಿಯಾ ಗಾಂಧಿ ಅವರು, ನಿರ್ಗಮಿಸಲು ಸಿದ್ಧರಾಗಿದ್ದು, ಇದೀಗ ಅವರ ಪುತ್ರ ಕಳೆದೈದು ವರ್ಷಗಳಿಂದ ಉಪಾಧ್ಯಕ್ಷರಾಗಿದ್ದ 47 ವರ್ಷದ ರಾಹುಲ್‌ ಗಾಂಧಿ ವಹಿಸಿಕೊಳ್ಳಲಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೇದಿನವಾಗಿದ್ದು ರಾಹುಲ್‌ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೀಗಾಗಿ ರಾಹುಲ್‌ ಅವರೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದಂತಾಗಿದ್ದು, ಮಂಗಳವಾರ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸೋಮವಾರ ಬೆಳಗ್ಗೆ ರಾಹುಲ್‌ ಮಾಡಿದ ಮೊದಲ ಕೆಲಸವೆಂದರೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ನಿವಾಸಗಳಿಗೆ ತೆರಳಿ ಆಶೀರ್ವಾದ ಪಡೆದದ್ದು. ಬಳಿಕ ನೆರೆಮನೆಯಲ್ಲೇ ಇರುವ ಸೋನಿಯಾ ಗಾಂಧಿ ಅವರ ಕಡೆಯಿಂದ ನಾಮನಿರ್ದೇಶಿತ ಪತ್ರಕ್ಕೆ ಸಹಿ ಹಾಕಿಸಿಕೊಂಡು ಅಕºರ್‌ ರೋಡ್‌ನ‌ಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಆದರೆ, ರಾಹುಲ್‌ ಜತೆ ಸೋನಿಯಾ ಅವರು ಉಪಸ್ಥಿತರಿರಲಿಲ್ಲ. ಪಕ್ಷದ ಚುನಾವಣಾ ಘಟಕದ ಮಾಹಿತಿಯಂತೆ ಸೋಮವಾರ ಬೆಳಗ್ಗೆವರೆಗೆ ಸಲ್ಲಿಕೆಯಾಗಿರುವ ಒಟ್ಟಾರೆ ನಾಮಪತ್ರಗಳ ಸಂಖ್ಯೆ 89. ಈ ಹಿಂದೆ ರಾಹುಲ್‌ ಅವರ ವಿರೋಧಿಸಿದ್ದವರೂ ನಾಮಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಪೈಕಿ ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಪ್ರಮುಖರು. ಇವರು ರಾಹುಲ್‌ ಪ್ರಧಾನಿಯಾಗಲು ಅತ್ಯಂತ ಸೂಕ್ತವಾದ ವ್ಯಕ್ತಿ ಎಂದು ನಂತರ ಬಣ್ಣಿಸಿದರು.

ಸಿಎಂ ಸಿದ್ದರಾಮಯ್ಯ ಉಪಸ್ಥಿತಿ
ಬೆಳಗ್ಗೆ 10.30ಕ್ಕೆ ಕಚೇರಿಗೆ ಬಂದ ರಾಹುಲ್‌ ಅವರು 11ರ ಸುಮಾರಿಗೆ ನಾಮಪತ್ರ ಸಲ್ಲಿಸಿದರು. ಒಟ್ಟಾರೆ ಐದು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಕೆಯಾಯಿತು. ಈ ನಾಮಪತ್ರಗಳಿಗೆ ನಾಮನಿರ್ದೇಶಿತರಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಸಿಎಂಗಳು, ಪಕ್ಷದ ಹಿರಿಯ ನಾಯಕರು, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ರಾಜ್ಯಗಳ ಉಸ್ತುವಾರಿಗಳು ಸಹಿ ಹಾಕಿದರು.

Advertisement

ನಾಮನಿರ್ದೇಶನ ಮಾಡಿದ ಪ್ರಮುಖರು
ಮೊದಲ ಸೆಟ್‌ನಲ್ಲಿ ಸಹಿ: ಸೋನಿಯಾ ಗಾಂಧಿ, ಮೋತಿಲಾಲ್‌ ವೋರಾ, ಅಹ್ಮದ್‌ ಪಟೇಲ್‌, ಮೋಹ್ಸಿನಾ ಕಿದ್ವಾಯಿ, ಕಮಲ್‌ ನಾಥ್‌, ಅಶೋಕ್‌ ಗೆಹೊÉàಟ್‌, ಮುಕುಲ್‌ ವಾಸ್ನಿಕ್‌, ಶೀಲಾ ದಿಕ್ಷೀತ್‌, ತರುಣ್‌ ಗೋಗಾಯ್‌ ಮತ್ತು ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ.

ಎರಡನೇ ಸೆಟ್‌ನಲ್ಲಿ ಅಂಕಿತ: ಮನಮೋಹನ್‌ ಸಿಂಗ್‌, ಆಸ್ಕರ್‌ ಫ‌ರ್ನಾಂಡೀಸ್‌, ಪಿ.ಚಿದಂಬರಂ, ಸುಶೀಲ್‌ಕುಮಾರ್‌ ಶಿಂಧೆ, ಆನಂದ್‌ ಶರ್ಮಾ, ಜ್ಯೋತಿರಾಧಿತ್ಯ ಸಿಂಧ್ಯಾ, ಸಿದ್ದರಾಮಯ್ಯ, ಮುಕುಲ್‌ ಸಂಗ್ಮಾ.

ಅತ್ತ ರಾಹುಲ್‌ ಗಾಂಧಿ ಅವರು ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಹಾಗೂ ಜಮ್ಮು ಕಾಶ್ಮೀರ ಮಾಜಿ ಸಿಎಂ ಉಮರ್‌ ಅಬ್ದುಲ್ಲಾ ಕೂಡ ರಾಹುಲ್‌ಗೆ ಶುಭ ಕೋರಿದ್ದಾರೆ.

ಕಾಂಗ್ರೆಸ್‌ನ ಪೀಡೀಕರಣ ಮುಗೀತು!
ಪಿಡಿ ನಾಯಿಯೇ ತನ್ನ ಟ್ವಿಟರ್‌ ಖಾತೆಯನ್ನು ನಿರ್ವಹಿಸುತ್ತದೆ ಎಂದು ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿಯನ್ನು ಅಣಕಿಸಿರುವ ಬಿಜೆಪಿ, ಕಾಂಗ್ರೆಸ್‌ನಲ್ಲಿ ಈಗ ಪೀಡೀಕರಣ (ಆನುವಂಶೀಯತೆ) ಪೂರ್ತಿಗೊಂಡಿದೆ. ವಿರೋಧ ಪಕ್ಷದಲ್ಲಿ ಹಳೆಯ ತಲೆಯಿರಲಿ ಅಥವಾ ಹೊಸ ತಲೆಯೇ ಇರಲಿ. ನಮಗೇನೂ ಸಮಸ್ಯೆಯಿಲ್ಲ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌ ನರಸಿಂಹ ರಾವ್‌ ಹೇಳಿದ್ದಾರೆ.

ಔರಂಗಾಜೇಬ್‌ ಪಟ್ಟಕ್ಕೆ ಅಪ್ಪಣೆ ಬೇಕೆ?
“”ಜಹಾಂಗೀರ್‌ ನಂತರ ಶಹಜಹಾನ್‌ ರಾಜನಾದಾಗ ಚುನಾವಣೆ ನಡೆದಿತ್ತೇ? ಶಹಜಹಾನ್‌ ನಂತರ ಔರಂಗಾಜೇಬ್‌ ಬಂದಾಗಲೂ ಚುನಾವಣೆ ಮಾಡಿದ್ದರೇ? ಎಂದಿಗೂ ರಾಜನ ಹುದ್ದೆ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತದೆ,” ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಸ್ವತಃ ಪಕ್ಷದ ಮುಖಂಡರಿಗೇ ಇರಿಸುಮುರಸು ಉಂಟು ಮಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ ಶೆಹಜಾದ್‌ ಪೂನಾವಾಲಾ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಯ್ಯರ್‌ ಈ ರೀತಿ ಹೇಳಿಕೆ ನೀಡಿದ್ದಾರೆ.

ಔರಂಗಜೇಬ್‌ ಆಡಳಿತಕ್ಕೆ ಶುಭವಾಗಲಿ ಎಂದ ಮೋದಿ
ಮಣಿಶಂಕರ್‌ ಅಯ್ಯರ್‌ ಔರಂಗ್‌ಜೇಬ್‌ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡರು ಈ ವಂಶಾಡಳಿತವನ್ನು ಒಪ್ಪಿಕೊಳ್ಳುತ್ತಾರೆಯೇ? ನಮಗೆ ಈ ಔರಂಗಾಜೇಬ್‌ ಆಡಳಿತ ಬೇಕಿಲ್ಲ. ಅವರ ಔರಂಗಾಜೇಬ್‌ ಆಡಳಿತಕ್ಕೆ ಶುಭವಾಗಲಿ. ನಮಗೆ ಜನರೇ ಮುಖ್ಯ. 125 ಕೋಟಿ ಜನರೇ ನಮ್ಮ ಹೈಕಮಾಂಡ್‌ ಎಂದು ಮೋದಿ ತಿರುಗೇಟು ನೀಡಿದ್ದಾರೆ. ತಮ್ಮದು ಪಕ್ಷವಲ್ಲ. ವಂಶಾಡಳಿತ ಎಂದು ಕಾಂಗ್ರೆಸ್‌ ಮುಖಂಡರೇ ಒಪ್ಪಿಕೊಳ್ಳುತ್ತಾರೆ ಎಂದು ತಿವಿದಿದ್ದಾರೆ. ಅಲ್ಲದೆ ಮೊಘಲರ ಆಡಳಿತಕ್ಕೆ ಕಾಂಗ್ರೆಸ್‌ ಹೋಲಿಕೆ ಮಾಡಿದ ಅವರು, ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿರುವ ವ್ಯಕ್ತಿಯನ್ನು ಅಧ್ಯಕ್ಷ ಹುದ್ದೆಗೇರಿಸಿದೆ ಎಂದು ಟೀಕಿಸಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖೀಸಿದ ಮೋದಿ, ಕಾಂಗ್ರೆಸ್‌ ಶಿಷ್ಟಾಚಾರವನ್ನು ಸಂಪೂರ್ಣ ಗಾಳಿಗೆ ತೂರಿದೆ. ಪಕ್ಷ ದಿವಾಳಿಯಾಗಿದೆ ಎಂದು ಆರೋಪಿಸಿದ್ದಾರೆ.

ಸೋನಿಯಾ ಸುದೀರ್ಘ‌ ಅಧ್ಯಕ್ಷಾವಧಿ ಮುಕ್ತಾಯ
1998ರಿಂದಲೂ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದ ಸೋನಿಯಾ ಪಕ್ಷದಲ್ಲೇ ಅತ್ಯಧಿಕ ಅವಧಿಗೆ ಈ ಹುದ್ದೆ ಅಲಂಕರಿಸಿದ ಮಹಿಳೆಯಾಗಿದ್ದಾರೆ. 19 ವರ್ಷದವರೆಗೆ ಅವರು ಕಾಂಗ್ರೆಸ್‌ ಚುಕ್ಕಾಣಿ ಹಿಡಿದಿದ್ದರು.

ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಡಾರ್ಲಿಂಗ್‌. ಸೋನಿಯಾ ಗಾಂಧಿ ಅವರು 19 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷ ಹಾಗೂ ಈ ಪಕ್ಷದ ಮೂಲಕ ದೇಶ ಸೇವೆ ಮಾಡಿದರು. ಇದೀಗ ಮತ್ತೂಂದು ಹೆಜ್ಜೆ ಇಟ್ಟಾಗಿದೆ. ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.
– ಮನಮೋಹನ ಸಿಂಗ್‌, ಮಾಜಿ ಪ್ರಧಾನಿ

ಕಾಂಗ್ರೆಸ್‌ನ ಹಿರಿಯ ನಾಯಕರೇ ಆಗಿರುವ ಮಣಿಶಂಕರ್‌ ಅಯ್ಯರ್‌ ಹೇಳುತ್ತಾರೆ; ಔರಂಗಾಜೇಬ್‌ ಪಟ್ಟಕ್ಕೆ ಅಪ್ಪಣೆ ಬೇಕೆ ಎಂದು. ಹಾಗಾದರೆ ಕಾಂಗ್ರೆಸ್‌ ವಂಶಾಡಳಿತ ಪಕ್ಷವೆಂದು ಒಪ್ಪಿಕೊಳ್ಳುತ್ತದೆಯೇ? ನಮಗೆ ಔರಗಾಂಜೇಬ್‌ ಆಡಳಿತ ಬೇಕಿಲ್ಲ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next