ಕಡೆಗೂ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲು ಮುಹೂರ್ತ ಕೂಡಿ ಬಂದಿರುವಂತೆ ಕಾಣಿಸುತ್ತದೆ. ಡಿ.31ರೊಳಗೆ ಆಂತರಿಕ ಚುನಾವಣೆಯನ್ನು ಮುಗಿಸುವ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್ ಅದಕ್ಕೂ ಮೊದಲೇ ರಾಹುಲ್ ಪಟ್ಟಾಭಿಷೇಕ ನೆರವೇರಿಸಲು ತಯಾರಿ ನಡೆಸುತ್ತಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಬಹುತೇಕ ಡಿ.5ರಂದೇ ರಾಹುಲ್ ಅಧ್ಯಕ್ಷರೆಂದು ಘೋಷಣೆಯಾಗುವ ಸಾಧ್ಯತೆಯಿದೆ. ಅಧ್ಯಕ್ಷರನ್ನು ಆರಿಸಲು ಕಾಂಗ್ರೆಸ್ ಪ್ರಜಾಪ್ರಭುತ್ವಿàಯ ಹಾದಿ ಅನುಸರಿಸಲು ನಿರ್ಧರಿಸಿದೆ. ಹೀಗಾಗಿ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ನಾಮಪತ್ರ ಸಲ್ಲಿಸುವುದು ಮತ್ತಿತರ ವಿಧಿವಿಧಾನಗಳು ನಡೆಯಲಿವೆ. ಆದರೆ ಶೇ.99 ಕಾಂಗ್ರೆಸಿಗರು ಈಗಾಗಲೇ ರಾಹುಲ್ ಗಾಂಧಿಯೇ ಅಧ್ಯಕ್ಷರೆಂದು ತೀರ್ಮಾನಿಸಿರುವ ಕಾರಣ ಚುನಾವಣೆ ಎನ್ನುವುದು ನೆಪಕ್ಕೆ ಮಾತ್ರ ನಡೆಯುವ ಪ್ರಹಸನ. ಮೊದಲೇ ಅಧ್ಯಕ್ಷರನ್ನು ತೀರ್ಮಾನಿಸಿದ ಬಳಿಕ ಅವರನ್ನು ಆರಿಸಲು ಚುನಾವಣೆ ನಡೆಸುವುದು ಒಂದು ರೀತಿಯಲ್ಲಿ ಪ್ರಜಾತಂತ್ರದ ಅಣಕದಂತೆ ಕಾಣುತ್ತದೆ. ಆದರೆ ಇದು ಪಕ್ಷದ ಆಂತರಿಕ ವಿಚಾರವಾಗಿರುವುದರಿಂದ ಬೇರೆಯವರು ಮೂಗುತೂರಿಸಲು ಸಾಧ್ಯವಿಲ್ಲ. ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ 19 ವರ್ಷಗಳಿಂದ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಸದ್ಯಕ್ಕೆ ಅನಾರೋಗ್ಯದಿಂದ ಬಳಲುತ್ತಿರುವ ಅವರು ಜವಾಬ್ದಾರಿಯನ್ನು ಪುತ್ರನಿಗೆ ವಹಿಸಲು ಮುಂದಾಗಿದ್ದಾರೆ. ಆದರೆ ಅಧಿಕಾರದ ಹಸ್ತಾಂತರದ ಕಾಲ ಮಾತ್ರ ಪಕ್ಷಕ್ಕೆ ಪೂರಕವಾಗಿಲ್ಲ. ಆದರೂ ನೆಹರು ವಂಶದ ಕುಡಿಯೇ ಕಾಂಗ್ರೆಸ್ ಸಾರಥಿಯಾಗಬೇಕೆಂಬ ಮನೋಧರ್ಮ ಕಾಂಗ್ರೆಸಿನಲ್ಲಿರುವುದರಿಂದ ರಾಹುಲ್ ಸಾರಥ್ಯ ವಹಿಸುವುದು ಅನಿವಾರ್ಯ.
ಈ ಮೂಲಕ ನೆಹರು ಕುಟುಂಬದ ಐದನೇ ತಲೆಮಾರಿನ ಕೈಗೆ ಪಕ್ಷದ ಚುಕ್ಕಾಣಿ ಹೋದಂತಾಗುತ್ತದೆ. ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ಅರ್ಧಕ್ಕೂ ಹೆಚ್ಚು ಕಾಲ ನೆಹರು ಕುಟುಂಬವೇ ಪಕ್ಷದ ಮುಂಚೂಣಿಯಲ್ಲಿದೆ ಮತ್ತು ಆ ಪಕ್ಷವೇ ದೇಶದಲ್ಲಿ ಅಧಿಕಾರವನ್ನು ಅನುಭವಿಸಿದೆ. ಹಾಗೆ ನೋಡಿದರೆ ರಾಹುಲ್ ಎಂದೋ ಅಧ್ಯಕ್ಷರಾಗಬೇಕಿತ್ತು. ಸಕ್ರಿಯ ರಾಜಕಾರಣಕ್ಕೆ ಬಂದ 13 ವರ್ಷಗಳ ಬಳಿಕ ಅವರು ನಾಯಕತ್ವ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಯಾವುದೇ ರಾಜಕೀಯ ನಾಯಕನಿಗೆ 13 ವರ್ಷದ ಅನುಭವ ಪಕ್ಷವನ್ನು ಮುನ್ನಡೆಸಲು ಧಾರಾಳ ಸಾಕು. ಆದರೆ ರಾಹುಲ್ ವಿಚಾರದಲ್ಲಿ ಸ್ವತಹ ಕಾಂಗ್ರೆಸಿಗರಿಗೆ ಈ ಮಾತನ್ನು ಖಚಿತವಾಗಿ ಹೇಳಲು ಧೈರ್ಯವಿಲ್ಲ. ಇಷ್ಟು ಸುದೀರ್ಘ ಅವಧಿಯಲ್ಲಿ ಬಹುಕಾಲ ರಾಜಕೀಯವನ್ನು ರಾಹುಲ್ ಒಂದು ಅರೆಕಾಲಿಕ ವೃತ್ತಿಯಂತೆ ಪರಿಗಣಿಸಿದ್ದರು. ಅವರು ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಲು ತೊಡಗಿದ್ದು 2014ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ. ಕಾಂಗ್ರೆಸ್ ಅಧಿಕೃತವಾಗಿ ಘೋಷಿಸದಿದ್ದರೂ ಅವರೇ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದರು. ಹೀಗಾಗಿ ಈ ಚುನಾವಣೆ ರಾಹುಲ್ ಮತ್ತು ಮೋದಿ ನಡುವಿನ ಹೋರಾಟವಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಕನಿಷ್ಠ ವಿಪಕ್ಷದ ಸ್ಥಾನಮಾನ ಪಡೆಯಲೂ ಸಾಧ್ಯವಾಗದೆ ಹೋದದ್ದು ರಾಹುಲ್‌ಗಾದ ದೊಡ್ಡ ಹಿನ್ನಡೆ. ಅನಂತರವೂ ಎದುರಿಸದ ಚುನಾವಣೆಯಲ್ಲೆಲ್ಲ ಕಾಂಗ್ರೆಸ್ ಮುಗ್ಗರಿಸಿದ ಕಾರಣ ಅವರ ಪಟ್ಟಾಭಿಷೇಕವನ್ನು ಮುಂದೂಡುತ್ತಾ ಹೋಗಲಾಯಿತು. ಒಂದು ಗೆಲುವಿನ ಬಳಿಕ ಅಧ್ಯಕ್ಷರಾದರೆ ಅದು ಸೃಷ್ಟಿಸುವ ಪ್ರಭಾವವೇ ಬೇರೆ. ಆದರೆ ಹಾಗೊಂದು ಗೆಲುವಿಗೆ ಕಾದು ಎಷ್ಟು ಸಮಯ ಪಟ್ಟಾಭಿಷೇಕವನ್ನು ಮುಂದೂಡುತ್ತಾ ಹೋಗುವುದು ಎನ್ನುವುದು ಕಾಂಗ್ರೆಸ್ ಚಿಂತೆ. ಈಗ ಇದ್ದುದರಲ್ಲಿ ಕಾಂಗ್ರೆಸ್ ತುಸು ಚೇತರಿಸಿಕೊಂಡಿರುವಂತೆ ಕಾಣಿಸುತ್ತದೆ.
ರಾಹುಲ್ ಗಾಂಧಿ ತನ್ನ ಕಾರ್ಯಶೈಲಿಯಲ್ಲಿ ಭಾರೀ ಮಾರ್ಪಾಟು ಮಾಡಿಕೊಂಡಿದ್ದಾರೆ. ದೇಶದಲ್ಲೂ ಅವರ ಪರವಾಗಿರುವ ಅಭಿಪ್ರಾಯವೊಂದು ರೂಪುಗೊಳ್ಳುತ್ತಿದೆ. ನಿರ್ದಿಷ್ಟವಾಗಿ ಯುವ ಜನತೆ ರಾಹುಲ್ ಗಾಂಧಿಯ ಬಗ್ಗೆ ಕುತೂಹಲ ತಾಳುತ್ತಿದೆ. ರಾಹುಲ್ ಗಾಂಧಿಯ ಪಟ್ಟಾಭಿಷೇಕದೊಂದಿಗೆ ಕಾಂಗ್ರೆಸ್‌ನಲ್ಲಿ ಯುವ ನಾಯಕರಿಗೆ ಹೆಚ್ಚಿನ ಆದ್ಯತೆಗಳು ಸಿಗುವ ನಿರೀಕ್ಷೆಯಿದೆ. ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ಪ್ರಮುಖ ರಾಜ್ಯಗಳಲ್ಲಿ ಯುವ ನಾಯಕರ ಕೈಗೆ ಪಕ್ಷದ ಚುಕ್ಕಾಣಿ ಸಿಕ್ಕಿದೆ. ಸ್ವತಃ ಯುವ ನಾಯಕನೆಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ಅಧ್ಯಕ್ಷರಾದರೆ ಪಕ್ಷದಲ್ಲಿ ಯುವ ಪರ್ವ ಪ್ರಾರಂಭವಾಗುವ ಸಾಧ್ಯತೆಯಿದೆ. ಆದರೆ ಇದೇ ವೇಳೆ ತಣಿಯದ ದಾಹ ಹೊಂದಿರುವ ಹಿರಿಯ ನಾಯಕರನ್ನು ಸಮಾಧಾನಪಡಿಸುವ ಕಠಿಣ ಸವಾಲು ಕೂಡ ರಾಹುಲ್ ಗಾಂಧಿಯ ಮುಂದಿದೆ. ಕಾಂಗ್ರೆಸ್‌ನೊಳಗೆ ತನ್ನದೊಂದು ತಂಡವನ್ನು ಕಟ್ಟುವ ಬದಲು ಕಾಂಗ್ರೆಸನ್ನೇ ಒಂದು ತಂಡವಾಗಿ ರೂಪಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ರಾಹುಲ್ ಪರಿಣಾಮಕಾರಿ ನಾಯಕನಾಗಬಹುದು.