ಹೊಸದಿಲ್ಲಿ : ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರದಲ್ಲಿನ ಎನ್‌ಡಿಎ ಸರಕಾರ ನಾಲ್ಕು ವರ್ಷ ಪೂರೈಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಗೆ ಸಿದ್ಧ ಪಡಿಸಿರುವ ರಿಪೋರ್ಟ್ ಕಾರ್ಡ್ ನಲ್ಲಿ ಎಫ್ ಗ್ರೇಡ್ ನೀಡಿದ್ದಾರೆ.
ಜತೆಗೆ ಹೊಸ ಹೊಸ ಘೋಷಣೆಗಳ ಸೃಷ್ಟಿ ಮತ್ತು ಸ್ವಪ್ರಚಾರದ ಶೈಲಿಗಾಗಿ ಎ+ ಗ್ರೇಡ್ ಕೂಡ ನೀಡಿದ್ದಾರೆ.
ರಾಹುಲ್ ಗಾಂಧಿ ನೀಡಿರುವ 4 ವರ್ಷಗಳ ರಿಪೋರ್ಟ್ ಕಾರ್ಡ್ ಹೀಗಿದೆ: ಕೃಷಿ: ಎಫ್, ವಿದೇಶ ನೀತಿ : ಎಫ್, ಇಂಧನ ದರ :ಎಫ್, ಉದ್ಯೋಗ ಸೃಷ್ಟಿ : ಎಫ್, ಘೋಷಣೆ ಸೃಷ್ಟಿ : ಎ+, ಸ್ವಪ್ರಚಾರ : ಎ+, ಯೋಗ : ಬಿ-
ರಿಮಾರ್ಕ್ : ಮಾಸ್ಟರ್ ಕಮ್ಯುನಿಕೇಟರ್, ಸಂಕೀರ್ಣ ವಿಷಯಗಳಲ್ಲಿ ಕಷ್ಟಪಡುವವರು, ಕಿರು ಅವಧಿಯ ಗಮನ.
ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿರುವ ಈ ದಿನವನ್ನು ಕಾಂಗ್ರೆಸ್ ಪಕ್ಷ “ದ್ರೋಹದ ದಿನ’ ಎಂದು ಕರೆದಿದೆ. ದೇಶದ ಜನರಿಗೆ ಕೊಟಿಟರುವ ಭರವಸೆಗಳನ್ನು ಪೂರೈಸಿಲ್ಲ; ಬದಲಾಗಿ ದೇಶಕ್ಕೆ ಭಾರಿ ಹಾನಿ ಉಂಟು ಮಾಡಿದೆ – ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ಎನ್‌ಡಿಎ ವೈಫಲ್ಯಗಳನ್ನು ಬಯಲು ಮಾಡುವ ಮತ್ತು ದೇಶಾದ್ಯಂತ ಪ್ರತಿಭಟನೆ ನಡೆಸುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.