Advertisement

ನೂತನ ಸಂಸದರಿಗೆ ರಾಹುಲ್‌ ಗಾಂಧಿ ಪಾಠ

11:27 PM Jun 07, 2024 | Team Udayavani |

ಬೆಂಗಳೂರು: ಸಂಸತ್ತು ಮತ್ತು ನಿಮ್ಮ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರಬೇಕು. ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಬೇಕು. ಯಾವುದೇ ಹೇಳಿಕೆಗಳು ಪಕ್ಷದ ಚೌಕಟ್ಟಿನಲ್ಲಿರಬೇಕೇ ಹೊರತು, ವೈಯಕ್ತಿಕವಾಗಿರಬಾರದು – ಇದು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ನೂತನ ಸಂಸದರಿಗೆ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ನೀಡಿದ ಪಾಠ ಇದು.

Advertisement

ಶುಕ್ರವಾರ ಖುದ್ದು ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾದ ಬಳಿಕ ರಾಹುಲ್‌ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳೊಂದಿಗೆ ಫ‌ಲಿತಾಂಶದ ಪರಾಮರ್ಶೆ ನಡೆಸಿದರು.

ಆಯ್ಕೆಯಾದವರಲ್ಲಿ ಕೆಲವರು ಹೊಸಬರಿದ್ದೀರಿ. ಸಂಸತ್ತಿನಲ್ಲಿ ಕ್ಷೇತ್ರದ್ದು ಸಹಿತ ಗಂಭೀರ ಸಮಸ್ಯೆಗಳ ಮೇಲೆ ಬೆಳಕುಚೆಲ್ಲಬೇಕು. ಪ್ರಮುಖ ಚರ್ಚೆ ಗಳಲ್ಲಿ ಭಾಗವಹಿಸಬೇಕು. ಭವಿಷ್ಯದ ದೃಷ್ಟಿಯಿಂದ ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು. ಪಕ್ಷದ ಚೌಕಟ್ಟಿನಲ್ಲಿ ಹೇಳಿಕೆಗಳನ್ನು ನೀಡಬೇಕು. ನಿಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಹೇಳಿಕೆಗಳನ್ನು ನೀಡಬಾರದು. ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನ ಮನ್ನಣೆ ಪಡೆಯಬೇಕು ಎಂದರು.

ಇದೇ ವೇಳೆ ಪರಾಭವಗೊಂಡ ಅಭ್ಯರ್ಥಿಗಳನ್ನು ಉದ್ದೇಶಿಸಿ, ಗೆಲುವಿಗೆ ಉತ್ತಮ ಪ್ರಯತ್ನ ಮಾಡಿದ್ದೀರಿ. ಸೋಲನುಭವಿಸಿದ ಮಾತ್ರಕ್ಕೆ ಕ್ಷೇತ್ರ ದಿಂದ ದೂರ ಉಳಿಯಬಾರದು. ಅಲ್ಲಿಯೇ ಇದ್ದು ಜನರ ಮನಸ್ಸು ಗೆಲ್ಲಲು ಪ್ರಯತ್ನಿಸಬೇಕು. ಸೋಲಿಗೆ ಕಾರಣಗಳು ಏನು? ಎಡವಿದ್ದು ಎಲ್ಲಿ ಎಂಬುದರ ಬಗ್ಗೆ ಪರಾಮರ್ಶೆ ಮಾಡಿ, ತಪ್ಪು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದೂ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದರು. ಲೋಕಸಭೆಗೆ ಆಯ್ಕೆಯಾದ 9 ಸಂಸದರಿಗೆ ಅಭಿನಂದನೆ ಸಲ್ಲಿಸಿ, ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು.

Advertisement

ಬೆಂಗಳೂರು ಹಾಗೂ ದಿಲ್ಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿರುವುದಾಗಿ ಹೇಳಿದರು.

ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ದನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಪೆರಿಫೆರಲ್‌ ರಿಂಗ್‌ ರಸ್ತೆ ಸಹಿತ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್‌ ತಿಳಿಸಿದ್ದಾರೆ ಎಂದರು.

ವರದಿ ಕೇಳಿದ ಹೈಕಮಾಂಡ್‌: ಡಿಕೆಶಿ
ಅನಿರೀಕ್ಷಿತ ಫ‌ಲಿತಾಂಶದ ಬೆನ್ನಲ್ಲೇ ಗೆಲ್ಲಿಸಿಕೊಂಡು ಬರುವಲ್ಲಿ ಸೋತ ಸಚಿವರು ಸಹಿತ ಕೆಲವು ನಾಯಕರಿಂದ ಹೈಕಮಾಂಡ್‌ ವರದಿ ಕೇಳಿದೆ ಎಂದು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವರಿಷ್ಠ ರಾಹುಲ್‌ ಗಾಂಧಿ ಎಲ್ಲ ಸಚಿವರ ಜತೆ ಚರ್ಚೆ ಮಾಡಿದ್ದಾರೆ. ಚುನಾವಣೆ ಫ‌ಲಿತಾಂಶದ ಬಗ್ಗೆ ಹೈಕಮಾಂಡ್‌ ವರದಿ ಕೇಳಿದ್ದು, ನಾವು ಎಲ್ಲ ನಾಯಕರ ಜತೆ ಚರ್ಚಿಸಿ ವರದಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಗ್ಯಾರಂಟಿಗಳ ಬಗ್ಗೆ ಚರ್ಚೆಯಾಯಿತಾ ಎಂಬಪ್ರಶ್ನೆಗೆ, ಅದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚುನಾವಣೆ ಪ್ರಕ್ರಿಯೆ, ಫ‌ಲಿತಾಂಶ ಹಾಗೂ ಭವಿಷ್ಯದ ಕಾರ್ಯಯೋಜನೆ ಬಗ್ಗೆ ಮಾತ್ರ ಮಾತುಕತೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next