ಮೂಡಬಿದಿರೆ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ.20ರಂದು ಮಂಗಳೂರು ಭೇಟಿ ನೀಡುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ಭಾವಚಿತ್ರ ಒಳಗೊಂಡ ಪ್ರಚಾರ ವಾಹನ ಜಾಥಾ ಕ್ಷೇತ್ರಾದ್ಯಂತ ಸಂಚರಿಸಲಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ ಸೋಜಾ ತಿಳಿಸಿದರು.
ಮೂಡಬಿದಿರೆಯಲ್ಲಿರುವ ತಮ್ಮ ಜನಸ್ಪಂದನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದಿನಕ್ಕೆ ಸುಮಾರು 250 ಕಿ.ಮೀ. ದೂರ ಚಲಿಸುವ ಪ್ರಚಾರ ವಾಹನ ಜಾಥಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಹಾದುಹೋಗಲಿದ್ದು ಆಯಾಯ ಪ್ರದೇಶದ ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡು ಮೂಲ್ಕಿಯಲ್ಲಿ ನಡೆಯಲಿರುವ ಕಾರ್ನರ್ ಮೀಟಿಂಗ್ ಹಾಗೂ ಮಂಗಳೂರಿನಲ್ಲಿ ಮಾ. 20ರಂದು ನಡೆಯುವ ಪ್ರಧಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಕ್ಷವು ಸಂಘಟಿತವಾಗಿದೆ. ಎಲ್ಲ ಶಾಸಕರು ಜಿಲ್ಲೆಗೆ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ತರುವ ಮುಖಾಂತರ ಜನರ ಆಶೋತ್ತರಗಳನ್ನು ಈಡೇರಿಸಿದ್ದಾರೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಪಡಂಗ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ಸಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್. ಪೂಜಾರಿ, ಯುವ ಕಾಂಗ್ರೆಸ್ ನಾಯಕ ಪದ್ಮನಾಭ ಶೆಟ್ಟಿ, ಸದಸ್ಯರಾದ ಸಿರಾಜ್ ಬಜಪೆ, ನಿಡ್ಡೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಲಾಝರಸ್ ಡಿ’ಕೋಸ್ಟ, ವಕೀಲರಾದ ಹರೀಶ್ ಪಿ., ಪ್ರಕಾಶ್ ಪಿ., ಕಾನೂನು ಘಟಕದ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಇದ್ದರು.
ಯುವ ಕಾರ್ಮಿಕ ಘಟಕದ ಸಂಯೋಜಕ ಜ್ಞಾನೇಶ್, ಪುರಸಭಾ ಸದಸ್ಯ ಅಲ್ವೀನ್ ಮೆನೇಜಸ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ರುಕ್ಕಯ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.