ನವದೆಹಲಿ: “ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಉಳಿಸಿಕೊಳ್ಳುವಂತಾಗಲು ಶಾಸಕರ ಖರೀದಿಗೆ ಪ್ರಧಾನಿ
ನರೇಂದ್ರ ಮೋದಿಯವರೇ ಕುಮ್ಮಕ್ಕು ನೀಡಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಕೂಡಲೇ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಈ ಪ್ರಕರಣದಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಪ್ರಧಾನಿ ಮೋದಿಯವರೇ ಭ್ರಷ್ಟಾಚಾರಿ. ಪ್ರಧಾನಿಯವರು ದೇಶಕ್ಕಿಂತ ಮತ್ತು ಸುಪ್ರೀಂಕೋರ್ಟ್‌ಗಿಂತ ದೊಡ್ಡವರಲ್ಲ ಎಂದೂ ರಾಹುಲ್ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ನಾಯಕರು ತೋರಿದ ಆಮಿಷಕ್ಕೆ ಬಲಿಯಾಗದೆ ಒಗ್ಗಟ್ಟು ತೋರಿಸಿದ್ದು ಸರಿಯಾಗಿಯೇ ಇದೆ ಎಂದೂ ಹೇಳಿದ್ದಾರೆ.
ಮನವಿಯೇ ಬಂದಿರಲಿಲ್ಲ: ಬೆಂಗಳೂರಿನಿಂದ ಕೊಚ್ಚಿಗೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಕರೆದೊಯ್ಯಲು ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡಲು ಮನವಿಯೇ ಸಲ್ಲಿಕೆಯಾಗಿರಲಿಲ್ಲ. ಹೀಗೆಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶ ನಾಲಯ (ಡಿಜಿಸಿಎ) ಶನಿವಾರ ಸ್ಪಷ್ಟನೆ ನೀಡಿದೆ. ಶಾಸಕರು ಬೆಂಗಳೂರಿನಿಂದ ಕೊಚ್ಚಿಗೆ ತೆರಳಲು ಚಾರ್ಟರ್ಡ್ ವಿಮಾನದ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು ಎಂದು ಕೇಳಿದ್ದರೂ ಮನವಿ ತಿರಸ್ಕರಿಸಲಾಗಿತ್ತು ಎಂದು ಜೆಡಿಎಸ್ ಗುರುವಾರ ಆರೋಪ ಮಾಡಿದ್ದಕ್ಕೆ ಈ ಸ್ಪಷ್ಟನೆ ನೀಡಿದೆ.
ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಟ್ವೀಟ್ ಮಾಡಿ, ಡಿಜಿಸಿಎಗೆ ಅಂಥ ಕೋರಿಕೆಯೇ ಬಂದಿಲ್ಲ. ದೇಶದ ಒಳಗಿನ ಚಾರ್ಟರ್ಡ್ ವಿಮಾನಗಳ ಬಳಕೆಗೆ ನಿರ್ದೇಶನಾಲಯದ ಅನುಮತಿ ಬೇಕಾಗಿಲ್ಲ. ಇದರ ಹೊರತಾಗಿಯೂ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.