Advertisement

ಆರ್‌ಎಸ್‌ಎಸ್‌, ಬಿಜೆಪಿಯಲ್ಲಿ ಮಹಿಳೆಯರಿಗೆ ಜಾಗವೇ ಇಲ್ಲ: ರಾಹುಲ್‌

04:41 PM Aug 07, 2018 | Team Udayavani |

ಹೊಸದಿಲ್ಲಿ : ”ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ  ಸಿದ್ಧಾಂತ ಹೇಗಿದೆ ಎಂದರೆ ಈ ದೇಶವನ್ನು ಕೇವಲ ಪುರುಷರು ಮಾತ್ರವೇ ನಡೆಸಬಲ್ಲರು, ಹೊರತು ಮಹಿಳೆಯರಲ್ಲ ಎಂಬುದೇ ಆಗಿದೆ. ಆದ ಕಾರಣವೇ ಅದು ಮಹಿಳೆಯರಿಗೆ ತನ್ನ ಸಂಸ್ಥೆಗಳ ಬಾಗಿಲನ್ನು ಮುಚ್ಚಿದೆ” ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿಯ ಮಾತುಗಳನ್ನಾಡಿದ್ದಾರೆ.

Advertisement

ದಿಲ್ಲಿಯಲ್ಲಿ ಮಹಿಳಾ ಅಧಿಕಾರ್‌ ಸಮ್ಮೇಳನ್‌ ನಲ್ಲಿ ಮಾತನಾಡುತ್ತಿದ್ದ ರಾಹುಲ್‌ ಗಾಂಧಿ, “ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗೆ ವಿರುದ್ಧವಾದ ಸಿದ್ಧಾಂತವನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷ ಸದಾ ಮಹಿಳೆಯರನ್ನು ಸ್ವಾಗತಿಸುತ್ತದೆ. ಆದುದರಿಂದಲೇ ಕಾಂಗ್ರೆಸ್‌ ಪಕ್ಷ ಮಹಿಳೆಯರನ್ನು ಗೌರವಿಸುವ, ಆದರಿಸುವ, ಪುರಸ್ಕರಿಸುವ ಪಕ್ಷವಾಗಿದೆ’ ಎಂದು ಹೇಳಿದರು. 

ಮಹಿಳೆಯರ ಸಶಕ್ತೀಕರಣದ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ, ಮಹಿಳೆಯರಿಗೆ ಎಲ್ಲ ಸ್ತರಗಳಲ್ಲಿ ಶೇ.50ರ ಮೀಸಲಾತಿ ನೀಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಆದುದರಿಂದ ದೇಶದ ಮಹಿಳೆಯರು ಮುಂದೆ ಬಂದು ರಾಷ್ಟ್ರಾಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

‘ಕೇಂದ್ರ ಸರಕಾರ ಕೇವಲ ಭರವಸೆಗಳನ್ನು ಮಾತ್ರವೇ ನೀಡುತ್ತದೆ. ಮಹಿಳಾ ಮೀಸಲಾತಿ ಮಸೂದೆ ಬಹಳ ದೀರ್ಘ‌ಕಾಲದಿಂದ ಪಾಸಾಗದೇ ಬಾಕಿ ಉಳಿದಿದೆ’ ಎಂದು ರಾಹುಲ್‌ ಆರೋಪಿಸಿದರು. 

‘ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಢಾವೋ ಅಂತಾರೆ; ಇವರು ಯಾರ ಬೇಟಿ ಬಗ್ಗೆ ಮಾತನಾಡುತ್ತಾರೆ ಎಂಬುದೇ ನನಗರ್ಥವಾಗುವುದಿಲ್ಲ. ಈಗ ನೋಡಿದರೆ ನಾವು ಬಿಜೆಪಿ ಶಾಸಕರು, ಸಚಿವರಿಂದಲೇ ನಮ್ಮ ಬೇಟಿಯನ್ನು ನಾವು ರಕ್ಷಿಸಬೇಕಾಗಿದೆ’ ಎಂದು ರಾಹುಲ್‌ ಕಟಕಿಯಾಡಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next