Advertisement

ನನ್ನನ್ನು ಮುಗಿಸಲು ಮೋದಿ, ಸಿಬಿಐ ಸಂಚು

08:42 AM May 01, 2018 | Team Udayavani |

ಹೊಸದಿಲ್ಲಿ: ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯಿಂದ ಸೋಮವಾರ ಡಿಸ್ಚಾರ್ಜ್‌ ಆಗಿದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅದನ್ನು ಒಪ್ಪದ ಲಾಲು, ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ, ಸಿಬಿಐ ಕಾರಣ. ನನ್ನ ಹತ್ಯೆ ನಡೆಸಲು ಸಂಚು ನಡೆದಿದೆ ಎಂದು ದೂರಿದ್ದಾರೆ.  ಈ ನಡುವೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಲಾಲುರನ್ನು ಭೇಟಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. 

Advertisement

ಸೋಮವಾರ ಏಮ್ಸ್‌ ವೈದ್ಯರು, ಅನಾರೋಗ್ಯದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಲಾಲು ಸ್ಥಿತಿ ಉತ್ತಮವಾಗಿದೆ. ಅವರಿಗೆ ಚಿಕಿತ್ಸೆ ನೀಡಲು ರಚಿಸಲಾಗಿರುವ ವೈದ್ಯರ ತಂಡದ ಶಿಫಾರಸಿನ ಮೇರೆಗೆ ಡಿಸ್ಚಾರ್ಜ್‌ ಮಾಡಲಾ ಗಿದೆ. ರಾಂಚಿ ವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಚಿಕಿತ್ಸೆ ನಡೆಯಲಿದೆ ಎಂದು ಪ್ರಕಟಣೆ ಹೊರಡಿಸಿದ್ದರು. ಈ ನಿರ್ಧಾರ ಖಂಡಿಸಿ ಲಾಲು ಬೆಂಬಲಿಗರು ವೈದ್ಯ ಸಂಸ್ಥೆಯಲ್ಲಿ ದಾಂದಲೆ ನಡೆಸಿದರು. ಹೀಗಾಗಿ ಒಬ್ಬ ಭದ್ರತಾ ಸಿಬಂದಿಗೆ ಗಾಯಗಳಾಗಿವೆ. ಇತರ ಸಿಬಂದಿಗೆ ಬೆದರಿಕೆಯನ್ನೂ ಹಾಕಲಾ ಗಿದೆ. ಈ ಕುರಿತು ಏಮ್ಸ್‌ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. 

ಅದಕ್ಕೆ ಪೂರಕವಾಗಿ ವ್ಹೀಲ್‌ ಚೇರ್‌ನಲ್ಲಿ ಬಂದ ಲಾಲು ಮಾತನಾಡಿ “ಇದು ಸರಿ ಯಾದ ಕ್ರಮವಲ್ಲ. ನನ್ನ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಯಾವುದೇ ಸೌಲಭ್ಯ ಇಲ್ಲದೇ ಇರುವ ಸ್ಥಳಕ್ಕೆ ನನ್ನನ್ನು ಸ್ಥಳಾಂತರ
ಗೊಳಿ ಸಲಾಗುತ್ತದೆ. ನನ್ನನ್ನು ಹತ್ಯೆ ಮಾಡುವ ಸಂಚು ನಡೆದಿದೆ. ಇದಕ್ಕೆಲ್ಲ ಪ್ರಧಾನಿ ಮೋದಿ, ಸಿಬಿಐ ಕಾರಣ’ ಎಂದು ದೂರಿದರು. 

ರಾಹುಲ್‌ ಭೇಟಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರ್‌ಜೆಡಿ ನಾಯಕ ಲಾಲು ಯಾದವ್‌ ಜತೆ ಭೇಟಿಯಾಗಿದ್ದರು. ಕೆಲ ಸಮಯ ಅವರು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್‌ನಲ್ಲಿ ಲಾಲು ಜತೆ ಮಾತುಕತೆ ನಡೆಸಿ ಆರೋಗ್ಯ, ಚಿಕಿತ್ಸೆಯ  ಬಗ್ಗೆ ಮಾಹಿತಿ ಪಡೆ ದರು. ಜತೆಗೆ ರಾಹುಲ್‌ ಲಾಲುರನ್ನು ಆಲಿಂಗಿಸಿಕೊಂಡರು. ಫೋಟೋಗೆ ಕೂಡ ಪೋಸ್‌ ನೀಡಿದರು. ಇದು ಟ್ವಿಟರ್‌, ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿ, ಟೀಕೆಗೆ ಕಾರಣವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತನಾಡಿ ಯಾವ ಕಾರಣಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷರು ಲಾಲು ಅವರನ್ನು ಭೇಟಿಯಾಗಿದ್ದರು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next