ಬೀದರ್: ರಫೇಲ್ ಯುದ್ಧ ವಿಮಾನ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಎಷ್ಟು ಗಂಟೆಯ ಚರ್ಚೆಗೂ ಸಿದ್ಧವಾಗಿದ್ದೇನೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಸೋಮವಾರ ಬೀದರ್ ನ ನೆಹರು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ಯುದ್ಧ ವಿಮಾನ ಒಪ್ಪಂದದ ವಿಚಾರದಲ್ಲಿ ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿ ಜೊತೆ ರಾಜಿಯಾಗಿದೆ ಎಂದು ಆರೋಪಿಸಿದರು.
ತಮ್ಮ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದೇಶದ ಚೌಕಿದಾರ್ ಈಗ ಭಾಗಿದಾರ್ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಅವರನ್ನು ಟೀಕಿಸಿದರು. ತಮ್ಮ “ಗೆಳೆಯ”ನಿಗಾಗಿ ರಾಫೇಲ್ ಗುತ್ತಿಗೆ ಕೊಡಿಸಲು ದೇಶದ ಜನರ ತೆರಿಗೆ ಹಣವನ್ನು ಕದ್ದು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಅವರು ದೇಶದ ಪ್ರಧಾನಿ ಅಲ್ಲ ಆದರೆ ದೇಶದ ಅತೀ ಶ್ರೀಮಂತ 15 ಮಂದಿ ಉದ್ಯಮಿಗಳ ಪ್ರಧಾನಿಯಾಗಿದ್ದಾರೆ.ರಾಫೇಲ್ ಗುತ್ತಿಗೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿದ್ದೇನೆ. ಆದರೆ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನನ್ನ ಕಣ್ಣಲ್ಲಿ, ಕಣ್ಣಿಟ್ಟು ನೋಡಿಲ್ಲ. ಸುಳ್ಳು ಹೇಳುವ ಮನಸ್ಸು ಯಾವಾಗಲೂ ಸತ್ಯ ಒಪ್ಪಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಟೀಕಿಸಿದರು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಭಾರತ ಮತ್ತು ಫ್ರಾನ್ಸ್ ಸರ್ಕಾರದ ಜೊತೆ 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಒಪ್ಪಂದ ನಡೆದಿತ್ತು. ಇದು ಒಟ್ಟು 58 ಸಾವಿರ ಕೋಟಿ ರೂಪಾಯಿ ಮೊತ್ತದ ಒಪ್ಪಂದವಾಗಿದೆ.