ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುವವರೆಗೂ ಜೆಡಿಎಸ್ ಜೊತೆಗಿನ ಮೈತ್ರಿ ಅತ್ಯಂತ ಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಗೊಂದಲ ಸೃಷ್ಟಿಸಿಕೊಳ್ಳದಂತೆ ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಡಕ್ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಶಾಸಕ ಎಸ್.ಟಿ. ಸೋಮಶೇಖರ್, ಸಚಿವರಾದ ಎಂ.ಟಿ.ಬಿ.ನಾಗರಾಜ್ ಹಾಗೂ ಪುಟ್ಟರಂಗ ಶೆಟ್ಟಿ ಅವರ ‘ಸಿದ್ದರಾಮಯ್ಯ ಪರ’ ಹೇಳಿಕೆಗಳಿಂದ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದರು. ಇದು ರಾಜ್ಯ ಕಾಂಗ್ರೆಸ್ ಅಷ್ಟೇ ಅಲ್ಲದೆ, ಹೈಕಮಾಂಡ್‌ಗೂ ತಲ್ಲಣ ಉಂಟು ಮಾಡಿತ್ತು. ತಕ್ಷಣ ಮಧ್ಯ ಪ್ರವೇಶಿಸಿದ್ದ ಹೈಕಮಾಂಡ್ ಪ್ರಕರಣಕ್ಕೆ ಅಂತ್ಯ ಹಾಡಲು ಪ್ರಯತ್ನ ನಡೆಸಿತ್ತು.
ಬುಧವಾರ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ರಾಹುಲ್ ಗಾಂಧಿ ದಿಢೀರ್ ದೆಹಲಿಗೆ ಕರೆಸಿಕೊಂಡು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆಗೆ ರಾಷ್ಟ್ರಮಟ್ಟದಲ್ಲಿ ಮೈತ್ರಿ ಅತ್ಯಂತ ಮಹತ್ವದ್ದಾಗಿದ್ದು, ಕರ್ನಾಟಕದಲ್ಲಿ ಮೈತ್ರಿಗೆ ತೊಂದರೆಯಾದರೆ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೈತ್ರಿ ಮುರಿಯದಂತೆ ನೋಡಿಕೊಳ್ಳಬೇಕು ಎಂದು ಇಬ್ಬರೂ ನಾಯಕರಿಗೂ ರಾಹುಲ್ ಗಾಂಧಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ನಿಮ್ಮ ಹಿಂಬಾಲಕರನ್ನು ನಿಯಂತ್ರಣದಲ್ಲಿಡಿ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪ್ರತ್ಯೇಕ ಸಭೆ: ರಾಹುಲ್ ಭೇಟಿಗೂ ಮೊದಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಬ್ಬರೂ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಇತ್ತೀಚಿನ ಬೆಳವಣಿಗೆಗಳ ಕುರಿತು ವಿವರಣೆ ಪಡೆದಿದ್ದಾರೆ. ನಂತರ ಮೂವರೂ ನಾಯಕರು ರಾಹುಲ್ ಗಾಂಧಿಯೊಂದಿಗಿನ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.