ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ದಿನಗಳಿಂದ ಇಂಥಹದ್ದೊಂದು ಸುದ್ದಿ ಹರಿದಾಡುತ್ತಿತ್ತು.
ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಿಗದಿತ ಓವರ್ ಸರಣಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಅದೇ ಸಮಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡುವ ಕಾರಣ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ಆಟಗಾರರ ತಂಡವನ್ನು ಲಂಕಾಗೆ ಕಳುಹಿಸಲಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
ಜುಲೈ 13ರಿಂದ 27ರವರೆಗೆ ಈ ಸರಣಿ ನಡೆಯಲಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ.
ಇದನ್ನೂ ಓದಿ:ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಶ್ಯಕಪ್ ಟಿ20 ಕ್ರಿಕೆಟ್ ರದ್ದು
ವಿರಾಟ್ ಕೊಹ್ಲಿ ತಂಡದ ಜೊತೆ ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಮತ್ತು ಸಹಾಯಕ ತರಬೇತುದಾರರು ಇಂಗ್ಲೆಂಡ್ ಗೆ ತೆರಳುವ ಕಾರಣ ಲಂಕಾ ವಿರುದ್ಧದ ತಂಡಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿರಲಿದ್ದಾರೆ. ಅವರೊಂದಿಗೆ ಸದ್ಯ ಎನ್ ಸಿಎ ದಲ್ಲಿರುವ ಸಹಾಯಕ ಸಿಬ್ಬಂದಿ ಲಂಕಾಗೆ ತೆರಳುವ ಸಾಧ್ಯತೆಯಿದೆ.
ಈ ತಿಂಗಳ ಅಂತ್ಯಕ್ಕೆ ತಂಡ ಪ್ರಕಟವಾಗುವ ನೀರೀಕ್ಷೆಯಿದೆ. ಶಿಖರ್ ಧವನ್ ಅಥವಾ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.