ಹೊಸದಿಲ್ಲಿ: ಮೂರು ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಹುದ್ದೆಯ ಆಹ್ವಾನವನ್ನು ಪ್ರಾಮಾಣಿಕವಾಗಿ ನಿರಾಕರಿಸಿದ್ದರು ಎಂಬ ಸಂಗತಿ ತಿಳಿದು ಬಂದಿದೆ.
ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಅಧ್ಯಕ್ಷ ವಿನೋದ್ ರಾಯ್ ಇಂಥದೊಂದು ಹೇಳಿಕೆ ನೀಡಿದ್ದಾರೆ. ಅಂದು ದ್ರಾವಿಡ್ ಕೌಟುಂಬಿಕ ಕಾರಣ ನೀಡಿದ್ದರು ಎಂಬುದಾಗಿ ಅವರು ಹೇಳಿದ್ದಾರೆ.
2017ರಲ್ಲಿ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನಸ್ತಾಪ ಮಾಡಿಕೊಂಡಿದ್ದರು. ಕುಂಬ್ಳೆ ಹುದ್ದೆ ಸಂಘರ್ಷಮಯ ಅಂತ್ಯ ಕಂಡಿತ್ತು. ಅಂದು ಸಿಒಎ ಈ ಹುದ್ದೆಗಾಗಿ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಿತ್ತು. ಆಗ ಅವರು ಭಾರತ “ಎ’ ಮತ್ತು ಅಂಡರ್-19 ತಂಡದ ಕೋಚ್ ಆಗಿದ್ದರು.
ಕುಟುಂಬವೂ ಮುಖ್ಯ ಸಿಒಎ ಆಹ್ವಾನವನ್ನು ರಾಹುಲ್ ದ್ರಾವಿಡ್ ಪ್ರಾಮಾಣಿಕ ರೀತಿಯಲ್ಲೇ ನಿರಾಕರಿಸಿ ತಮ್ಮ ಪರಿಸ್ಥಿತಿಯನ್ನು ಹೇಳಿ ಕೊಂಡರು. “ನೋಡಿ, ಬೆಳೆಯುವ ಹುಡುಗರಿಬ್ಬರು ಮನೆಯಲ್ಲಿದ್ದಾರೆ. ನಾನು ಕ್ರಿಕೆಟ್ ತಂಡಗಳ ಜತೆ ಪ್ರಪಂಚ ಪ್ರದಕ್ಷಿಣೆ ಮಾಡುತ್ತಿರುತ್ತೇನೆ. ಮಕ್ಕಳ ಆಗುಹೋಗುಗಳಿಗೆ ಸ್ಪಂದಿಸಲು ನಮಗೆ ಸಮಯವೇ ಸಿಗುತ್ತಿಲ್ಲ. ನಾನು ಮನೆಯಲ್ಲೂ ಸ್ವಲ್ಪ ಸಮಯ ಇದ್ದು ಕುಟುಂಬದವರೊಂದಿಗೆ ಕಾಲ ಕಳೆಯಬೇಕಿದೆ…’ ಎನ್ನುವ ಮೂಲಕ ರಾಹುಲ್ ದ್ರಾವಿಡ್ ಈ ಆಹ್ವಾನವನ್ನು ತಿರಸ್ಕರಿಸಿದರು ಎಂದು ವಿನೋದ್ ರಾಯ್ ಹೇಳಿದರು.
“ದ್ರಾವಿಡ್ ಕಿರಿಯರಿಗೆ ತರಬೇತಿ ನೀಡಿ ಭಾರತೀಯ ಕ್ರಿಕೆಟಿನ ಹಾದಿ ಯನ್ನು ಸುಗಮಗೊಳಿಸಿದ್ದಾರೆ. ಕಳೆದ ವರ್ಷ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್ ಹುದ್ದೆಯನ್ನು ಖುಷಿಯಿಂದಲೇ ಸ್ವೀಕರಿಸಿದರು’ ಎಂದು ರಾಯ್ ಹೇಳಿದರು.