Advertisement

ವಿಶ್ವ ಗೆದ್ದು ಕನಸು ನನಸಾಗಿಸಿಕೊಂಡ ವಾಲ್‌

11:37 AM Feb 10, 2018 | Team Udayavani |

ಸಚಿನ್‌ ತೆಂಡುಲ್ಕರ್‌ ಅವರಂತೆ ಸ್ಫೋಟಕ ಆಟ ನೀಡಿಲ್ಲ. ಸೌರವ್‌ ಗಂಗೂಲಿಯಂತೆ ಖಡಕ್‌ ನಾಯಕತ್ವ ಪ್ರದರ್ಶಿಸಲಿಲ್ಲ. ಆದರೆ, ಇಂದಿಗೂ ರಾಹುಲ್‌ ದ್ರಾವಿಡ್‌ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಅಂದರೆ ಅದು ಅವರ ಕಲಾತ್ಮಕ ಆಟದಿಂದ. ಎಷ್ಟೇ ವೇಗದಲ್ಲಿ ಬಂದ ಚೆಂಡಾದರೂ ಅದು ದ್ರಾವಿಡ್‌ ಕಾಲಿನ ಬುಡಕ್ಕೇ ಬಂದು ಸೈಲೆಂಟ್‌ ಆಗುತ್ತಿತ್ತು.  ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿಶ್ವಕಪ್‌ ಗೆದ್ದ ತಂಡದಲ್ಲಿ ಇರಲಿಲ್ಲ ಎಂಬ ಬೇಸರ ಹಲವರಲ್ಲಿತ್ತು. ಅದೀಗ ದೂರವಾಗಿದೆ. ಅಷ್ಟೇ ಅಲ್ಲ, ಭಾರತ ಕಿರಿಯರ ವಿಶ್ವಕಪ್‌ ಗೆದ್ದಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಗಳನ್ನು ಗಮನಿಸಿದಾಗ, ದ್ರಾವಿಡ್‌ ಆಟ ಬಿಟ್ಟರೂ ಅಭಿಮಾನಿಗಳ ಹೃದಯ ಬಿಟ್ಟಿಲ್ಲ ಅನ್ನುವುದು ಖಚಿತವಾಗಿದೆ.

Advertisement

“ನನಗೆ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಯಾವ ವಿಷಾದವೂ ಇಲ್ಲ. ನನ್ನ ಕ್ರಿಕೆಟ್‌ ಆಟದ ಬದುಕು ಈಗಾಗಲೇ ಮುಗಿದಿದೆ. ಹೀಗಾಗಿ ಅದನ್ನೆಲ್ಲ ನಾನು ಮರೆತುಬಿಟ್ಟಿದ್ದೇನೆ. ಈಗ ಈ ಹುಡುಗರ ಸಾಧನೆಯನ್ನು ಕಂಡು ಹೆಮ್ಮೆಯಾಗುತ್ತಿದೆ. ಕಠಿಣ ಸವಾಲುಗಳನ್ನು ಎದುರಿಸಿ ಚಾಂಪಿಯನ್ನರಾಗಿ ಹೊರಹೊಮ್ಮಿರುವ ಇವರನ್ನು ನೋಡುವುದೇ ಒಂದು ಖುಷಿ’

ಈ ಮಾತನ್ನು ಹೇಳಿದ್ದು, ಭಾರತ ಅ-19 ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌. ನ್ಯೂಜಿಲೆಂಡ್‌ನ‌ಲ್ಲಿ ಟ್ರೋಫಿ ಗೆದ್ದು, ಭಾರತಕ್ಕೆ ಬಂದು ಇಳಿದ ತಕ್ಷಣವೇ ದ್ರಾವಿಡ್‌ ಆಡಿರುವ ಮಾತು ಇದು. ನಾಯಕನಾಗಿ ವಿಶ್ವಕಪ್‌ ಗೆದ್ದಿಲ್ಲ ಅನ್ನುವ ನೋವು, 2011ರ ವಿಶ್ವಕಪ್‌ ಗೆದ್ದ ತಂಡದಲ್ಲಿ ತಾನು ಇರಲಿಲ್ಲ ಎಂಬ ವಿಷಾದ ದ್ರಾವಿಡ್‌ಗೆ ಇದೆಯೋ ಇಲ್ಲವೋ ತಿಳಿಯದು. ಆದರೆ ಅವರ ಅಭಿಮಾನಿಗಳಿಗೆ ಮಾತ್ರ ಈಗಲೂ ಆ ನೋವಿದೆ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ ಅನೇಕ ದಾಖಲೆಗಳನ್ನು ನಿರ್ಮಿಸಿದವರು. ಕಲಾತ್ಮಕ ಆಟದಿಂದ ಅಭಿಮಾನಿಗಳ ಮತ್ತು ವಿರೋಧಿಗಳ ಹೃದಯ ಗೆದ್ದವರು. ತಂಡ ಅಪಾಯದಲ್ಲಿದ್ದಾಗ ಆಪತಾºಂಧವರಾಗಿ “ದಿ ವಾಲ್‌’ ಎಂದೇ ಖ್ಯಾತರಾದವರು. 16 ವರ್ಷಗಳ ಕ್ರಿಕೆಟ್‌ ಜೀವನದಲ್ಲಿ ವಿಶ್ವಕಪ್‌ ಗೆದ್ದ ತಂಡದಲ್ಲಿ ಅವರು ಇರಲಿಲ್ಲ. 1999, 2003 ಹಾಗೂ 2007ರ ವಿಶ್ವಕಪ್‌ ಟೂರ್ನಿಯಲ್ಲಿ ಅವರು ತಂಡದಲ್ಲಿದ್ದರು. 2007ರಲ್ಲಿ ಅವರೇ ತಂಡದ ನಾಯಕನೂ ಆಗಿದ್ದರು. ಮೂರು ವಿಶ್ವಕಪ್‌ನಲ್ಲಿ ಪಾಲ್ಗೊಂಡರೂ ದ್ರಾವಿಡ್‌ಗೆ ಟ್ರೋಫಿ ಎತ್ತಲು ಸಾಧ್ಯವಾಗಿರಲಿಲ್ಲ. ಆದರೆ ಆ ಕನಸನ್ನು ನನಸು ಮಾಡಿದ್ದು, ಇತ್ತೀಚೆಗೆ ನಡೆದ ಅ-19 ಏಕದಿನ ವಿಶ್ವಕಪ್‌.

ಕೋಚ್‌ ಹುದ್ದೆಯತ್ತ…
ನಿವೃತ್ತಿಯ ನಂತರ ದ್ರಾವಿಡ್‌ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಆಡಿದ್ದಾರೆ. ಆ ನಂತರ ಐಪಿಎಲ್‌ನಿಂದಲೂ ದೂರವಾಗಿ ಕೋಚ್‌ ಹುದ್ದೆಯ ಕಡೆ ದೃಷ್ಟಿ ಹರಿಸಿದರು. ಭಾರತದ “ಎ’ ತಂಡ ಮತ್ತು ಕಿರಿಯರ ತಂಡಕ್ಕೆ ಕೋಚ್‌ ಆಗಿ ನೇಮಕವಾದರು.

Advertisement

ಯುವ ಪ್ರತಿಭೆಗಳನ್ನು ಗುರುತಿಸಿ ಅಗತ್ಯ ತರಬೇತಿ ನೀಡಿದರು. ಇದರ ಫ‌ಲವಾಗಿಯೇ ಭಾರತ 2016ರಲ್ಲಿ ನಡೆದ ಅ-19 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿತು. ಆದರೆ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತವಾಗಬೇಕಾಯಿತು. ಹಾಕಿದ ಶ್ರಮ ವ್ಯರ್ಥವಾಗಲಿಲ್ಲ. ಅದು, ಫ‌ಲನೀಡಿದ್ದು, 2018ರ ಅ-19 ವಿಶ್ವಕಪ್‌ನಲ್ಲಿ. ಭರ್ಜರಿ ಪ್ರದರ್ಶನ ನೀಡಿದ ಪೃಥ್ವಿ ಶಾ ನೇತೃತ್ವದ ತಂಡ ಚಾಂಪಿಯನ್‌ ಪಟ್ಟಕ್ಕೇರಿತು. ಈ ಮೂಲಕ ರಾಹುಲ್‌ ದ್ರಾವಿಡ್‌ ಆಟಗಾರನಾಗಿ ವಿಶ್ವಕಪ್‌ ಗೆಲ್ಲಲಾಗದಿದ್ದರೂ ಕೋಚ್‌ ಆಗಿ ವಿಶ್ವಕಪ್‌ ಗೆಲುವು ಪಡೆದರು.

ಅಭಿಮಾನಿಗಳಲ್ಲಿ ಅಳಿಯದ ದ್ರಾವಿಡ್‌ ನೆನಪು
ದ್ರಾವಿಡ್‌ ಆಟ ಬಿಟ್ಟು 6 ವರ್ಷವಾಗುತ್ತಾ ಬಂದರೂ ಅಭಿಮಾನಿಗಳಲ್ಲಿ ಅಭಿಮಾನ ಕಮ್ಮಿಯಾಗಿಲ್ಲ. ಸಚಿನ್‌ ಅವರಂತೆ ಸ್ಫೋಟಕ ಆಟದ ಪ್ರದರ್ಶನವನ್ನು ದ್ರಾವಿಡ್‌ ನೀಡಿಲ್ಲ. ಸೌರವ್‌ ಗಂಗೂಲಿಯಂತಹ ಖಡಕ್‌ ನಾಯಕತ್ವವನ್ನು ಪ್ರದರ್ಶಿಸಿಲ್ಲ. ಆದರೆ ತಂಡ ಅಪಾಯದಲ್ಲಿದ್ದಾಗ ನೆರವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡದ ಪಾಲಿಗೆ ಗೋಡೆಯಾಗಿ ನಿಂತಿದ್ದಾರೆ. ಮಹತ್ವದ ಪಂದ್ಯಗಳಲ್ಲಿ ನೆಲಕಚ್ಚಿಯಾಡಿ ಭಾರತಕ್ಕೆ ಗೆಲುವು ತಂದಿದ್ದಾರೆ. ಅತಿರಥ ಮಹಾರಥ ಬೌಲರ್‌ಗಳನ್ನು ಸುಸ್ತು ಮಾಡಿದ್ದಾರೆ. ಎಷ್ಟೇ ವೇಗದ ಎಸೆತ ಬಂದರೂ ಚೆಂಡು ಅಲ್ಲಿಯೇ ನೆಲಕಚ್ಚಿ ಆಡುವ ಚಾಣಾಕ್ಷತನ ದ್ರಾವಿಡ್‌ಗೆ ಇತ್ತು.  ಆ ಕಲಾತ್ಮಕತೆಯನ್ನು ಮತ್ತೂಬ್ಬ ಬ್ಯಾಟ್ಸ್‌ಮನ್‌ನಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ದ್ರಾವಿಡ್‌ ಅಚ್ಚಳಿಯದೇ ಉಳಿದಿದ್ದಾರೆ.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next