Advertisement

Amruthapura: ಅಮೃತಪುರವೆಂಬ ಅದ್ಭುತ ತಾಣ

03:33 PM Apr 27, 2024 | Team Udayavani |

ವಿಶಿಷ್ಟವಾದ ವಾಸ್ತು ಶಿಲ್ಪ ಹಾಗೂ ಕೌಶಲದಿಂದ ಭಾರತದ ಕೆಲವು  ದೇವಾಲಯಗಳು ಇಂದಿಗೂ ಅಜರಾಮರವಾಗಿ ಪ್ರಖ್ಯಾತಿಯನ್ನು ಪಡೆದಿದೆ. ಕೆಲವು ದೇವಾಲಯಗಳಲ್ಲಿನ ರಹಸ್ಯಗಳನ್ನು ಇಂದಿಗೂ ಬಗೆಹರಿಸಲಾಗದೇ ಇರುವುದನ್ನು ಗಮನಿಸಬಹುದು. ಅವು ಇಂದಿಗೂ ಕೂಡ ವಿಜ್ಞಾನಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.

Advertisement

ಹಾಗೆಯೇ ನಮ್ಮ ಕರ್ನಾಟಕದಲ್ಲಿನ ಇಂತಹ ಅದ್ಭುತ ದೇವಾಲಯಗಳಲ್ಲಿ ಅಮೃತೇಶ್ವರ ದೇವಾಲಯವೂ ಒಂದು. ಈ ದೇವಾಲಯದ ಅದ್ಭುತವಾದ ಶಿಲ್ಪಕಲೆ ಎಂತಹವರನ್ನೂ ಮೂಕವಿಸ್ಮಿತ ರನ್ನಾಗಿಸುತ್ತದೆ. ಅಮೃತೇಶ್ವರ ದೇವಾಲಯದ ಕಲಾ ಸೌಂದ ರ್ಯಕ್ಕೆ ಎಂತವರೂ ಕೂಡ ಬೆರಗಾಗಲೇ ಬೇಕು.

ಈ ಸುಂದರವಾದ ದೇವಾಲಯವಿರುವುದು ಚಿಕ್ಕಮಗಳೂರು ಜಿಲ್ಲೆಯ ಒಂದು ಸಣ್ಣ ಅಮೃತಪುರ ಎಂಬ ಹಳ್ಳಿಯಲ್ಲಿ. ಅಮೃತಪುರವು ಅಮೃತೇಶ್ವರ ದೇವಾಲಯಕ್ಕೆ ಖ್ಯಾತಿಯನ್ನು ಪಡೆದಿದೆ. ಶಿಲ್ಪಕಲೆಗಳನ್ನು  ಹೊಂದಿರುವ ಈ ದೇವಾಲಯವನ್ನು ನಿರ್ಮಿಸಿದವರು ಹೊಯ್ಸಳ ರಾಜವಂಶದ 2ನೇ ವೀರ ಬಳ್ಳಾಲ. ಈ ದೇವಾಲಯವನ್ನು ಸುಮಾರು 1196ರಲ್ಲಿ ನಿರ್ಮಿಸಿದ್ದಾರೆ ಎಂದು ಇತಿಹಾಸ ತಿಳಿಸುತ್ತದೆ.

ವಾಸ್ತು ಶಿಲ್ಪ

Advertisement

ಈ ಅಮೃತೇಶ್ವರ ದೇವಾಲಯವನ್ನು ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಒಂದು ವಿಶಾಲವಾದ ತೆರೆದ ಮಂಟಪದ ನಿರ್ಮಾಣವನ್ನು ಕಾಣಬಹುದಾಗಿದೆ. ಇದೊಂದು ಹೊಯ್ಸಳ ನಿರ್ಮಾಣ ಶೈಲಿಯ  ನಿರ್ದಶನವಾಗಿದೆ. ಈ ದೇವಾಲಯದಲ್ಲಿ ಸಮಾನವಾದ ವೃತ್ತಾಕಾರದ ಕೆತ್ತನೆಗಳನ್ನು ಹೊಂದಿರುವ ಹೊರ ಗೋಡೆಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಗೋಪುರವಂತೂ ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ. ಈ ದೇವಾಲಯದ ಮಂಟಪ ರಚನೆ ಮತ್ತು ಗಾತ್ರ ಹಂಪಿಯ ವೀರ ನಾರಾಯಣ ದೇವಾಲಯಕ್ಕೆ ಹೋಲಿಕೆಯಾಗುವಂತೆ ಇದೆ ಎಂಬುದು ಪ್ರವಾಸಿಗರ ಅಭಿಪ್ರಾಯ. ತೆರೆದ ಮಂಟಪವು 29 ಕೊಲ್ಲಿಗಳನ್ನು ಹಾಗೂ ಮುಚ್ಚಿದ ಮಂಟಪವು 9 ಕೊಲ್ಲಿಗಳನ್ನು ಒಳಗೊಂಡಿದೆ.

ಹೊಯ್ಸಳ ಲಾಂಛನ

ಈ ದೇವಾಲಯವನ್ನು ಹೊಯ್ಸಳರು ನಿರ್ಮಾಣ ಮಾಡಿರುವುದು ಎಂಬುದಕ್ಕೆ ಸಾಕ್ಷಿಯೆಂಬಂತೆ ಈ ದೇವಾಲಯದಲ್ಲಿ ಹೊಯ್‌ ಎಂಬ ರಾಜನು ಸಿಂಹವನ್ನು ಕೊಲ್ಲುತ್ತಿರುವ ಹೊಯ್ಸಳರ ಲಾಂಛನವನ್ನು ಇಲ್ಲಿ ಕಾಣಬಹುದು. ಈ ದೇವಾಲಯದಲ್ಲಿನ ಒಳಛಾವಣಿಯನ್ನು ಕಂಡರೆ ಮೂಕವಿಸ್ಮಿತ ರಾಗುವುದಂತೂ ಖಂಡಿತ. ಮಂಟಪದ ಮಧ್ಯಭಾಗದಲ್ಲಿ ಸುಂದರವಾದ ಹೂವಿನ ವಿನ್ಯಾಸವಿದೆ. ಇದರೊಂದಿಗೆ ಅನೇಕ ಅಲಂಕಾರಿಕ ಒಳಾಂಗಣ ಕೆತ್ತನೆಗಳನ್ನು ಕಾಣಬಹುದು. ಈ ಸುಂದರವಾದ ಕೆತ್ತನೆಯು ಇಲ್ಲಿಗೆ ಬರುವ ಹಲವಾರು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

ದೇವಾಲಯದ ಹೊರಭಾಗದಲ್ಲಿ ವಾಲಿ ಮತ್ತು ಸುಗ್ರೀವರು ಯುದ್ಧ ಮಾಡುತ್ತಿರುವ ಶಿಲ್ಪಗಳು, ಹಿಂದೂ ದೇವತಾ ಮೂರ್ತಿಗಳು, ಹಳೆಗನ್ನಡ ಶಾಸನಗಳ ಕೆತ್ತನೆಗಳನ್ನು ಕಾಣಬಹುದಾಗಿದೆ. ಇಲ್ಲಿನ ಬಹುತೇಕ  ಕೆತ್ತನೆಗಳಿಗೆ ಕಪ್ಪು ಬಳಪದ ಕಲ್ಲುಗಳನ್ನು ಬಳಸಲಾಗಿದೆ. ಶ್ರೀಮಂತ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಗೆ ಬೆಳಕು ಹಿಡಿಯುವಂತಹ ಈ ಅಮೃತೇಶ್ವರ ದೇವಸ್ಥಾನದ  ಇತಿಹಾಸವನ್ನು ತಿಳಿಯುವ ಕುತೂಹಲವಿರುವವರು ಈ ತಾಣಕ್ಕೆ ಭೇಟಿ ನೀಡಬಹುದು.

 -ನೈದಿಲೆ ಶೇಷೆಗೌಡ

ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next