ಮುಂಬೈ: ಟೀಂ ಇಂಡಿಯಾದಲ್ಲಿ ಕೋಚಿಂಗ್ ಪಯಣ ಮುಗಿಸಿದ ರಾಹುಲ್ ದ್ರಾವಿಡ್ ಸದ್ಯ ಬೆಂಗಳೂರಿನಲ್ಲಿದ್ದಾರೆ. ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ರಾಹುಲ್ ದ್ರಾವಿಡ್ ಅವರ ಮುಂದಿನ ನಡೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದೆ.
ಆಟಗಾರನಾಗಿ ರಾಜೀನಾಮೆ ನೀಡಿದ ಬಳಿಕ ಐಪಿಎಲ್ ಕೋಚ್ ಆಗಿ, ಬಳಿಕ ಅಂಡರ್ 19 ತಂಡದ ಕೋಚ್, ಎನ್ ಸಿಎ ಅಧ್ಯಕ್ಷರಾಗಿದ್ದ ರಾಹುಲ್ 2021ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ದ್ರಾವಿಡ್ ನೇಮಕವಾಗಿದ್ದರು.
ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರು ಮತ್ತೆ ಐಪಿಎಲ್ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಮೆಂಟರ್ ಆಗಿ.
ಹಾಲಿ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮೆಂಟರ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಈ ಬಾರಿ ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾದ ಮುಂದಿನ ಕೋಚ್ ಆಗುವುದು ಬಹುತೇಕ ಅಂತಿಮವಾಗಿದೆ. ಹೀಗಾಗಿ ಗಂಭೀರ್ ಅವರಿಂದ ತೆರವಾಗುವ ಜಾಗಕ್ಕೆ ಕೆಕೆಆರ್ ಫ್ರಾಂಚೈಸಿ ರಾಹುಲ್ ದ್ರಾವಿಡ್ ಅವರನ್ನು ಕೇಳಿಕೊಂಡಿದೆ.
ರಾಹುಲ್ ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮೆಂಟರ್ ಮತ್ತು ಕೋಚ್ ಆಗಿ ಕೆಲಸ ಮಾಡಿದ್ದಾರೆ. ದ್ರಾವಿಡ್ 2017 ರಲ್ಲಿ ಹಿತಾಸಕ್ತಿ ಸಂಘರ್ಷದ ಕಾರಣದಿಂದ ಕೆಲಸ ತೊರೆಯುವ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿಯ ಕೋಚ್ ಆಗಿದ್ದರು.