Advertisement

Movie Review: ಥ್ರಿಲ್ಲರ್‌ ಹಾದಿಯಲ್ಲಿ ಒಂಟಿ ಹೋರಾಟ

02:33 PM Apr 29, 2023 | Team Udayavani |

ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ದೇಶಕರು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಆ ತರಹದ ಒಂದು ಪ್ರಯೋಗವಾಗಿ ಮೂಡಿಬಂದ ಚಿತ್ರ ಈ ವಾರ ತೆರೆಕಂಡಿರುವ “ರಾಘು’.

Advertisement

ವಿಜಯರಾಘವೇಂದ್ರ ನಾಯಕರಾಗಿರುವ ಈ ಸಿನಿಮಾದ ವಿಶೇಷತೆ ಎಂದರೆ ಇದು ಏಕವ್ಯಕ್ತಿ ಚಿತ್ರ. ಇಡೀ ಸಿನಿಮಾವನ್ನು ನಾಯಕ ವಿಜಯ ರಾಘವೇಂದ್ರ ಅವರೇ ಮುಂದುವರೆಸಿಕೊಂಡು ಹೋಗಿದ್ದಾರೆ. “ರಾಘು’ ಒಂದು ಥ್ರಿಲ್ಲರ್‌ ಜಾನರ್‌ ಸಿನಿಮಾ. ಇಡೀ ಸಿನಿಮಾದ ಕಥೆ ಕೋವಿಡ್‌ ಸಮಯದಲ್ಲಿ, ಅದರಲ್ಲೂ ರಾತ್ರಿಯಲ್ಲಿ ನಡೆದಿದೆ.

ಮನೆ ಮನೆಗೆ ಮೆಡಿಸಿನ್‌ ತಲುಪಿಸುವ ಡೆಲಿವರಿ ಬಾಯ್‌ವೊಬ್ಬನ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಆತನ ಎರಡು ಮುಖದ ಪರಿಚಯವಿದೆ, ಅದರ ಹಿಂದಿನ ಆತನ ಲೆಕ್ಕಾಚಾರ ಬಂದು ಹೋಗುತ್ತದೆ. ಅದಕ್ಕಿಂತ ಹೆಚ್ಚಾಗಿ ಕರ್ಮ ರಿಟರ್ನ್ಸ್ ಎಂಬಂತೆ ಆತ ಹೇಗೆ ಪರದಾಡುತ್ತಾನೆ ಎಂಬುದು ಈ ಸಿನಿಮಾದ ಮೂಲ ಅಂಶ.

ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಆದರೆ, ಅವೆಲ್ಲವೂ “ಧ್ವನಿ’ಗಷ್ಟೇ ಸೀಮಿತವಾಗಿದ್ದು, ನಾಯಕ ವಿಜಯ ರಾಘವೇಂದ್ರ ಅವರೇ ಇಡೀ ತೆರೆಯನ್ನು ಆವರಿಸಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಇದೊಂದು ಥ್ರಿಲ್ಲರ್‌ ಸಿನಿಮಾ. ಅದರಲ್ಲೂ ರಾತ್ರಿವೇಳೆ ನಡೆಯುವ ಕಥೆ. ಆ ಮಟ್ಟಿಗೆ ನಿರ್ದೇಶಕರು ಕಥೆಗೆ ಪೂರಕವಾದ ಪರಿಸರ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾನ್ಯವಾಗಿ ಒಂದೇ ಪಾತ್ರ ಇಡೀ ಸಿನಿಮಾವನ್ನು ಆವರಿಸಿಕೊಂಡಾಗ ಏಕತಾನತೆ ಕಾಡುವ ಸಾಧ್ಯತೆ ಇದೆ. ಆದರೆ, “ರಾಘು’ ಅದರಿಂದ ಹೊರಗಿರುವ ಸಿನಿಮಾ. ನಿರ್ದೇಶಕರು ಕ್ಷಣ ಕ್ಷಣಕ್ಕೂ ಟ್ವಿಸ್ಟ್‌ ನೀಡುತ್ತಾ ರಾಘು ಓಟವನ್ನು ವೇಗವಾಗಿಸಿದ್ದಾರೆ. ಆ ಮಟ್ಟಿಗೆ ಅವರ ಪ್ರಯತ್ನ ಮೆಚ್ಚಬೇಕು. ಇಡೀ ಸಿನಿಮಾದಲ್ಲಿ ಒಂದೇ ಪಾತ್ರವಿಟ್ಟುಕೊಂಡು ಕಥೆಯನ್ನು ರೋಚಕವಾಗಿ ಹೇಳಲು ಪ್ರಯತ್ನಿಸಿ ದ್ದಾರೆ. ಈ ಪ್ರಯತ್ನದಲ್ಲಿ ಸಣ್ಣಪುಟ್ಟ ಗೊಂದಲಗಳು ಕಾಣುತ್ತವೆ. ಅವೆಲ್ಲವನ್ನು ಬದಿಗಿಟ್ಟು ನೋಡಿದಾಗ “ರಾಘು’ ಒಂದು ಪ್ರಯತ್ನವಾಗಿ ಮೆಚ್ಚುವಂತಹ ಸಿನಿಮಾ.

Advertisement

ಮೊದಲೇ ಹೇಳಿದಂತೆ ನಟ ವಿಜಯ ರಾಘವೇಂದ್ರ ಅವರು ಇಡೀ ಸಿನಿಮಾವನ್ನು ಎಲ್ಲೂ ಬೋರ್‌ ಆಗದಂತೆ ಮುನ್ನಡೆಸಿಕೊಂಡು ಹೋಗಿದ್ದಾರೆ. ಅವರ ಹಾವ-ಭಾವ ಎಲ್ಲವೂ ಪಾತ್ರಕ್ಕೆ ಪೂರಕವಾಗಿದೆ. ಮುಖ್ಯವಾಗಿ ಈ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣ ಕಥೆಯನ್ನು ಎತ್ತಿಹಿಡಿದಿದೆ. ಒಂದು ವಿಭಿನ್ನ ಪ್ರಯತ್ನವಾದ “ರಾಘು’ ವನ್ನು ಒಮ್ಮೆ ಕಣ್ತುಂಬಿ ಕೊಳ್ಳಬಹುದು.

-ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next