Advertisement

Ragarathna Malike: ಶ್ರೋತೃಗಳನ್ನು ರಂಜಿಸಿದ ಯುವ ಕಲಾವಿದೆ ಪ್ರಜ್ಞಾಅಡಿಗ

01:54 AM Aug 25, 2024 | Team Udayavani |

ವಿದ್ವತ್‌ಪೂರ್ಣವಾದ ಹಾಗೂ ಉನ್ನತ ಮಟ್ಟದ ಒಂದು ಸಂಗೀತ ಕಛೇರಿಯನ್ನು ಆಲಿಸುವ ಯೋಗವನ್ನು ಉಡುಪಿಯ ಶ್ರೋತೃಗಳಿಗೆ ಒದಗಿಸಿದ ಯುವ ಕಲಾವಿದೆ ನಮ್ಮ ಊರಿನ ಹೆಮ್ಮೆಯ ಕುವರಿ ಪ್ರಜ್ಞಾ ಅಡಿಗ.

Advertisement

ಉಡುಪಿಯ “ರಾಗ ಧನ’ ಸಂಸ್ಥೆಯ “ರಾಗರತ್ನ ಮಾಲಿಕೆ’ ಸರಣಿಯ 26ನೆಯ ಕಾರ್ಯಕ್ರಮವಾಗಿ, ಪ್ರಜ್ಞಾ ಅಡಿಗ ಅವರ ಹಾಡುಗಾರಿಕೆ, ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಆತ್ಮವಿಶ್ವಾಸದಿಂದ ಕೂಡಿದ ಇಂಪಾದ ಕಂಠಸಿರಿ; ಸಭಿಕರು ಮತ್ತು ಸಹವಾದಕರೊಂದಿಗೆ ಚೈತನ್ಯಪೂರ್ಣವಾದ ಸಂವಹನ; ಸು#ಟವಾಗಿ ಮೂಡಿಬರುವ ಬಿರ್ಕಾಗಳಲ್ಲೂ ಧ್ವನಿಸುವ ರಾಗ ಮತ್ತು ಸಾಹಿತ್ಯ ಶುದ್ಧತೆ.

ಈ ಕಛೇರಿಯಲ್ಲಿ ಗಮನ ಸೆಳೆದ ಅಂಶವೆಂದರೆ ಅತ್ಯುತ್ತಮವಾದ ಅನುಕ್ರಮಣಿಕೆ; ನಿರ್ದಿಷ್ಟ ರಾಗಗಳು, ಕೃತಿಗಳು ಮತ್ತು ಅವುಗಳ ಕಾಲಮಿತಿಯಲ್ಲಿ ಕರಾರುವಾಕ್ಕಾಗಿ ನಿರ್ವಹಿಸುವ ಗಾಯಕಿ ತಮ್ಮ ಪ್ರಸ್ತುತಿಗಳನ್ನು ಲಕ್ಷಣಯುತವಾಗಿ ಮತ್ತು ಸ್ವಯಂ ಪರಿಪೂರ್ಣವಾಗಿ ಅದೇ ಸಮಯ ಎಲ್ಲಿಯೂ ಅನಗತ್ಯವಾಗಿ ಬೆಳೆಸದೆ ನಿರೂಪಿಸಿ, ಅವುಗಳ ತಾಜಾತನವನ್ನು, ಅಂತೆಯೇ ಕಛೇರಿಯ ಬಿಗುತನವನ್ನು ಕೊನೆಯವರೆಗೂ ಕಾದುಕೊಂಡರು.

ಬೆಹಾಗ್‌ ವರ್ಣದೊಂದಿಗೆ ಕಛೇರಿ ಪ್ರಾರಂಭ; ನವಿರಾದ ಪಲಕುಗಳಿಂದ ಕೂಡಿದ ಕಿರು ಆಲಾಪನೆ ಮತ್ತು ಸ್ವರವಿನಿಕೆಗಳ ರೀತಿಗೌಳ (ರಾಗರತ್ನ ಮಾಲಿಕೆ ಕೃತಿ) ಸೌಖ್ಯವಾದ ರಾಗ ವಿಸ್ತಾರದಿಂದ ಮನ ಸೆಳೆದ ಕಾಂಭೋಜಿ (ಏಮಯ್ಯ ರಾಮ) ಕೃತಿಗಳ ಅನಂತರ ಕಲ್ಯಾಣಿಯನ್ನು (ನಿನು ವಿನಾ ಗತಿ) ವಿಸ್ತರಿಸಲಾಯಿತು. ಕರ್ಣರಂಜನೀಯವಾಗಿ ವೃದ್ಧಿ ಸುವ ಸಂಗತಿಗಳು, ಹುರುಪಿನಿಂದ ಕೂಡಿದ ಏಕಾವರ್ತ ಸ್ವರ ಕಲ್ಪನೆಗಳಿಂದ ವೇದಿಕೆ ಕಳೆಗಟ್ಟಿತು.

ತ್ವರಿತಗತಿಯ ವಸಂತರಾಗದ ಕೃತಿಯು “ಮರಕತ ಲಿಂಗಂ’, ತದನಂತರ ಎತ್ತಿಕೊಳ್ಳಲಾದ “ತೋಡಿ’ (ನಿನ್ನೆ ನಮ್ಮಿನಾನು) ಪ್ರಧಾನವಾಗಿ ವಿಜೃಂಭಿಸಿತು. ಎಲ್ಲೂ ನೀರಸವೆನಿಸದ ಆಲಾಪನೆ, ಗ್ರಹ ಭೇದ, ನೆರವಲ…, ರೋಚಕವಾದ ‘ಕುರೈಪ್ಪು’ಗಳು ವಿವಿಧ ವಿನ್ಯಾಸಗಳಿಂದ ಕೂಡಿದ ಮುಕ್ತಾಯಗಳು ಸಭಿಕರ ಮುಕ್ತ ಪ್ರಶಂಸೆಗೆ ಪಾತ್ರವಾದವು. ಕಲಾವಿದೆಯ ಇಂಗಿತವರಿತು ನಾಗೇಂದ್ರ ಪ್ರಸಾದ್‌ ಅವರು ಮೃದಂಗದಲ್ಲಿ ನೀಡಿದ ಗಣಿತ ಲೆಕ್ಕಾಚಾರಗಳು ಮತ್ತು ಅವರ ತನಿ ಆವರ್ತನ ಶ್ರೋತೃಗಳಿಂದ ಸೈ ಎನಿಸಿಕೊಂಡಿತು. ಉತ್ತಮವಾದ ಹೊಂದಾಣಿಕೆಯೊಂದಿಗೆ ವಯೊಲಿನ್‌ ಸಹಕಾರ ನೀಡಿದ ಕೃತಿ ಕೌಶಿಕ್‌ ಅಭಿನಂದನಾರ್ಹರು. ಮೂವರೂ ಕಲಾವಿದರ ಹೊಂದಾಣಿಕೆ ಅನನ್ಯವಾಗಿತ್ತು. ಕಾಪಿ ರಾಗದ ದೇವರ ನಾಮ, ಮರಾಠಿ ಅಭಂಗ ಮತ್ತು ಹಂಸಾನಂದಿ ತಿಲ್ಲಾನದೊಂದಿಗೆ ಕಛೇರಿ ಸಂಪನ್ನವಾಯಿತು.

Advertisement

- ಸರೋಜಾ ಆರ್‌. ಆಚಾರ್ಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next